

ಬೆಂಗಳೂರು: ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಸುಗಮ ಸಂಚಾರ ಸಲುವಾಗಿ ಸಕ್ರಾ ಆಸ್ಪತ್ರೆ ಕಡೆಗೆ ಸಂಪರ್ಕಿಸುವ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ಪ್ರಾಯೋಗಿಕವಾಗಿ ಮಾರ್ಪಾಡು ಮಾಡಲಾಗಿದೆ. ಸಾರ್ವಜನಿಕರ ಮತ್ತು ವಾಹನ ಸವಾರರಿಗೆ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಪೂರ್ವ ಸಂಚಾರ ವಿಭಾಗ ಡಿಸಿಪಿ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.
ಶುಕ್ರವಾರಿಂದ ಮೇ 8ರ ವರೆಗೆ ಸಕ್ರಾ ಆಸ್ಪತ್ರೆ ರಸ್ತೆ ಕಡೆಯಿಂದ ದೇವರಬೀಸನಹಳ್ಳಿ ಜಂಕ್ಷನ್ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಸಕ್ರಾ ಆಸ್ಪತ್ರೆ ರಸ್ತೆ ಕಡೆಯಿಂದ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಸಕ್ರಾ ಆಸ್ಪತ್ರೆ ಮುಖ್ಯ ರಸ್ತೆ ಮೂಲಕ ಬೆಳ್ಳಂದೂರು ಕೋಡಿ ಕಡೆಗೆ ಸಂಚರಿಸಬೇಕು. ಅಲ್ಲಿಂದ ಬೆಳ್ಳಂದೂರು ಮುಖ್ಯ ರಸ್ತೆ ಮುಖಾಂತರ ಹೊರವರ್ತುಲ ರಸ್ತೆ ತಲುಪಿ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.
ಸಕ್ರಾ ಆಸ್ಪತ್ರೆ ರಸ್ತೆ ಕಡೆಯಿಂದ ಕಾಡುಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಸಕ್ರಾ ಆಸ್ಪತ್ರೆ ರಸ್ತೆ ಮೂಲಕ ಹೊಸವರ್ತುಲ ರಸ್ತೆ ಕಡೆಗೆ ಸಂಚರಿಸಿ ಗಣೇಶ ದೇವಸ್ಥಾನ ಕ್ರಾಸ್ ಬಳಿ ಎಡತಿರುವು ಪಡೆಯಬೇಕು. ಬಳಿಕ ಕಾಡುಬೀಸನಹಳ್ಳಿ ಜಂಕ್ಷನ್ ತಲುಪಿ ಯು ಟರ್ನ್ ಪಡೆದು ಹೊರವರ್ತುಲ ರಸ್ತೆಯ ಸರ್ವಿಸ್ ರಸ್ತೆಯ ಮುಖಾಂತರ ಸೆಸ್ನಾ ಬಿಸಿನೆಸ್ ಪಾರ್ಕ್ ಕಡೆಗೆ ಪ್ರವೇಶಿಸಿ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ ಎಂದು ಪೊಲೀಸರು ಸೂಚಿಸಿದ್ದಾರೆ.