ರಸ್ತೆ ದಾಟುತ್ತಿದ್ದ ಹುಲಿಗೆ ವಾಹನ ಡಿಕ್ಕಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ

tiger
Published on

ಭೋಪಾಲ್ : ಹೆದ್ದಾರಿಯನ್ನು ದಾಟುತ್ತಿದ್ದ ಹುಲಿಯು ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಉಮಾರಿಯ ಜಿಲ್ಲೆ ವ್ಯಾಪ್ತಿಯ ಗುನ್​ಘುಟ್ಟಿ ಅರಣ್ಯ ವಲಯದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 35 ಕಿಲೋಮೀಟರ್​ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 43 ರಲ್ಲಿ ನಡೆದಿರುವ ದುರ್ಘಟನೆಯಲ್ಲಿ, ಮೃತಪಟ್ಟಿರುವ ಹುಲಿಯು ಸಮೀಪದ ಬಂಧವಗಡ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ್ದಲ್ಲ. ಅದರ ವಯಸ್ಸು ಮತ್ತಿತರ ವಿವರಗಳನ್ನು ತಿಳಿಯಲು ಫೊರೆನ್ಸಿಕ್​ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉಮಾರಿಯ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್​​ಒ) ಮೋಹಿತ್​ ಸೂದ್ ಹೇಳಿದ್ದಾರೆ.

"ಈ ರೀತಿಯ ಅಪಘಾತಗಳು ಮುಂದೆ ನಡೆಯದಂತೆ ರಸ್ತೆಬದಿಗಳಲ್ಲಿ ಸೈನ್​ಬೋರ್ಡ್​ಗಳನ್ನು ಹಾಕಲು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಹೆದ್ದಾರಿಯ ವಾಹನ ಚಾಲಕರು ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುವುದು" ಎಂದಿರುವ ಡಿಎಫ್​ಒ ಸೂದ್​, ಹೆದ್ದಾರಿಯಲ್ಲಿ ಸ್ಪೀಡ್​ಬ್ರೇಕರ್​ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೂ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net