

ಬೆಂಗಳೂರು: ಕರೊನಾ ಸೋಂಕು ಹರಡದಂತೆ ರಾಜ್ಯಾದ್ಯಂತ ಕರ್ಫ್ಯೂ ವಿಧಿಸಿದ್ದರೂ ಸ್ಪಂದಿಸದ ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಎಲ್ಲೆಡೆ ನಾಕಬಂದಿ ಹಾಕಿ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು ರಸ್ತೆಯಲ್ಲಿ ಓಡಾಡುವ ಬೈಕ್ ಮತ್ತು ವಾಹನ ಚಾಲಕ/ಸವಾರರನ್ನು ಯಾವ ಉದ್ದೇಶಕ್ಕೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದಿದ್ದಾರೆ ಎಂಬುದು ಖಚಿತವಾದರೆ ಅಂಥವರ ಬೈಕ್, ಕಾರು ಜಪ್ತಿ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಭಾನುವಾರ ಒಂದೇ ದಿನ 1400ಕ್ಕೂ ಅಧಿಕ ಬೈಕ್, ಕಾರು ಜಪ್ತಿ ಮಾಡಿದ್ದಾರೆ. ಇವರ ವಿರುದ್ಧ ಸರ್ಕಾರದ ಆದೇಶ ಉಲ್ಲಂಘನೆ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ. ಇದೇ ರೀತಿ ಆಯಾ ಜಿಲ್ಲಾ ಎಸ್ಪಿ ಮತ್ತು ಕಮಿಷನರ್ಗಳಿಗೆ ಕರ್ಫ್ಯೂ ಆದೇಶವನ್ನು ಸೋಮವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರ ಸೂಚನೆ ನೀಡಿದೆ.
ಸದ್ಯಕ್ಕೆ ವಾಹನ ಸಿಗಲ್ಲ: ಪೊಲೀಸರು ಜಪ್ತಿ ಮಾಡಿದ ವಾಹನ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರೆ ಆ ನಂತರ ಕೋರ್ಟ್ನಲ್ಲಿಯೇ ದಂಡ ಪಾವತಿ ಮಾಡಿ ವಾಪಸ್ ಪಡೆಯಬೇಕು. ಆದರೆ, ತುರ್ತು ಪ್ರಕರಣಗಳ ವಿಚಾರಣೆ ಹೊರತುಪಡಿಸಿ ಕೋರ್ಟ್ ಕಲಾಪಗಳನ್ನೂ ಮುಂದೂಡ ಲಾಗಿದೆ. ಕರ್ಫ್ಯೂ ನಿಯಮ ಉಲ್ಲಂಘನೆ ಎಂದಾದರೇ ಕೋರ್ಟ್ನಲ್ಲಿಯೂ ವಾಹನ ಬಿಡುಗಡೆ ಕಷ್ಟವಾಗುತ್ತದೆ.
301 ಬೈಕ್ ಸೀಜ್: 4 ದಿನದಲ್ಲಿ ಬೆಳಗಾವಿ ಜಿಲ್ಲಾದ್ಯಂತ 301 ಬೈಕ್ ಸೀಜ್ ಮಾಡಿ, ನೋಟಿಸ್ ನೀಡಲಾಗಿದೆ. 41 ಜನರ ವಿರುದ್ಧ ಕೇಸ್ ದಾಖಲಿಸಿ ದಂಡ ಹಾಕಲಾಗಿದೆ. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಭಾನುವಾರ 200ಕ್ಕೂ ಹೆಚ್ಚು ಬೈಕ್ ಜಪ್ತಿ ಮಾಡಲಾಗಿದೆ.
ಶಿಸ್ತುಕ್ರಮ
ರಾಜ್ಯದಲ್ಲಿ ಕರ್ಫ್ಯೂ ಜಾರಿಯಾದ ಮೇಲೆ ಜನರಿಗೆ ಅರ್ಥ ಆಗದೆ ಓಡಾಡಿರಬಹುದು. ಪೊಲೀಸರೂ ಆರಂಭದಲ್ಲಿ ಲಾಠಿ ಪ್ರಹಾರ ನಡೆಸಿದ್ದಾರೆ. ನಮ್ಮ ಸಿಬ್ಬಂದಿ ಮೇಲೆಯೂ ಹಲ್ಲೆಯಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಪೊಲೀಸರ ಕೆಲಸವಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಗಲಭೆ ಸೃಷ್ಟಿಯಾಗಿಲ್ಲ. ಇದೊಂದು ಆರೋಗ್ಯ ಇಲಾಖೆ ಕೆಲಸ. ಪೊಲೀಸರು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರು ಕೈ ಜೋಡಿಸಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಿ ಎಂದು ಮನವಿ ಮಾಡಿದ್ದಾರೆ.
ನಿಯಮ ಮೀರಿದರೆ ಹಣೆಗೆ ಸೀಲ್
ಸುಖಾಸುಮ್ಮನೆ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಬುದ್ಧಿ ಹೇಳಿ ಸಾಕಾದ ವಿಜಯಪುರ ಗಾಂಧಿಚೌಕ್ ಪೊಲೀಸರು ವಿಶೇಷ ರೀತಿಯ ಶಿಕ್ಷೆ ವಿಧಿಸುವ ಮೂಲಕ ಗಮನಸೆಳೆದಿದ್ದಾರೆ. ಲಾಕ್ಡೌನ್ ಉಲ್ಲಂಘಿಸಿದವರನ್ನು ಹಿಡಿದು, ಅವರ ಹಣೆಗೆ ‘ನಾನು ಸಮಾಜದ ವಿರೋಧಿ ಇದ್ದೇನೆ. ಲಾಕ್ ಡೌನ್ ಉಲ್ಲಂಘಿಸಿದ್ದೇನೆ’ ಎನ್ನುವ ಬರಹವಿರುವ ಮುದ್ರೆ ಒತ್ತುತ್ತಿದ್ದಾರೆ. ಜತೆಗೆ ಮತ್ತೊಮ್ಮೆ ನಿಯಮ ಉಲ್ಲಂಘಿಸದಂತೆ ಖಡಕ್ ಎಚ್ಚರಿಕೆ ಕೊಟ್ಟು ಕಳಿಸುತ್ತಿದ್ದಾರೆ.
ಭಾನುವಾರದ ಹೈಲೈಟ್ಸ್