ವಾಹನಗಳ ನವೀಕರಣ ಶುಲ್ಕ 16 ಪಟ್ಟು ಹೆಚ್ಚಳ: ಆರ್​ಸಿ ನವೀಕರಣ ಶುಲ್ಕ ಏರಿಕೆ

vehicle
Published on

ಬೆಂಗಳೂರು: ಹದಿನೈದು ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ (ಟ್ರಾನ್ಸ್​ಪೋರ್ಟ್) ವಾಹನಗಳ ಫಿಟ್​ನೆಸ್ ಸರ್ಟಿಫಿಕೇಟ್ (ಎಫ್​ಸಿ) ಪರಿಷ್ಕೃತ ಶುಲ್ಕ ಏ.1ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಮೊದಲಿದ್ದ ಶುಲ್ಕಕ್ಕಿಂತ ಬರೋಬ್ಬರಿ 16 ಪಟ್ಟು ಏರಿಕೆಯಾಗಿದ್ದು, ಆರ್​ಟಿಒ ಕಚೇರಿಗೆ ಹೋದ ಮಾಲೀಕರ ತಲೆ ತಿರುಗುವಂತಾಗಿದೆ. ಇದೇ ವೇಳೆ ಖಾಸಗಿ ವಾಹನಗಳ ಆರ್​ಸಿ ನವೀಕರಣ ಶುಲ್ಕವನ್ನೂ ಹೆಚ್ಚಳ ಮಾಡಲಾಗಿದೆ.

ಟ್ರಾನ್ಸ್​ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ 2 ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. 8 ವರ್ಷಗಳ ನಂತರ ಪ್ರತಿವರ್ಷ ಎಫ್​ಸಿ ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಜಾರಿಗೊಳಿಸುವ ಭಾಗವಾಗಿ ಎಫ್​ಸಿ ಶುಲ್ಕ ಏರಿಕೆ ಮಾಡಲಾಗಿದೆ. ಈವರೆಗೆ ಎಫ್​ಸಿ ವಿಳಂಬವಾದರೆ ಗರಿಷ್ಠ 100 ರೂ. ದಂಡ ವಿಧಿಸಲಾಗುತ್ತಿತ್ತು. ಆದರೀಗ ಪ್ರತಿದಿನಕ್ಕೆ 50 ರೂ. ದಂಡ ಹಾಕಲು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ವಾಹನಗಳ ಆರ್​ಸಿ ನವೀಕರಣ ಶುಲ್ಕವೂ ಹೆಚ್ಚಳವಾಗಿದೆ. ದ್ವಿಚಕ್ರ ವಾಹನಕ್ಕೆ 600 ರೂ. ಹಾಗೂ ಲಘು ಮೋಟಾರು ವಾಹನ (ಕಾರು)ಗಳಿಗೆ 1100 ರೂ. ಆರ್​ಸಿ ನವೀಕರಣ ಶುಲ್ಕ ಇತ್ತು. ಆದರೀಗ ದ್ವಿಚಕ್ರ ವಾಹನಕ್ಕೆ 1200 ರೂ. ಹಾಗೂ ಕಾರುಗಳಿಗೆ 5200 ರೂ.ಗೆ ಏರಿಕೆ ಮಾಡಲಾಗಿದೆ. ನವೀಕರಣ ವಿಳಂಬವಾದಲ್ಲಿ ಪ್ರತಿ ತಿಂಗಳಿಗೆ ದ್ವಿಚಕ್ರ ವಾಹನಕ್ಕೆ 300 ರೂ. ಹಾಗೂ ಕಾರುಗಳಿಗೆ 500 ರೂ. ದಂಡ ವಸೂಲಿ ಮಾಡಲು ಸೂಚಿಸಲಾಗಿದೆ.

ಅಧಿಕಾರಿಗಳಿಗೆ ಗೊಂದಲ: ಖಾಸಗಿ ವಾಹನಗಳ ಆರ್​ಸಿ ನವೀಕರಣದ ವೇಳೆ ದ್ವಿಚಕ್ರ ವಾಹನಕ್ಕೆ 250 ರೂ. ಗ್ರೀನ್ ಟ್ಯಾಕ್ಸ್ ಹಾಗೂ 500 ರೂ. ರಸ್ತೆ ಸುರಕ್ಷತೆ ತೆರಿಗೆ ಪಡೆಯಲಾಗುತ್ತಿತ್ತು. ಆದರೆ, ಪರಿಷ್ಕೃತ ಶುಲ್ಕದ ಪಟ್ಟಿಯಲ್ಲಿ ಇದರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಗ್ರೀನ್ ಟ್ಯಾಕ್ಸ್ ಹಾಗೂ ರಸ್ತೆ ಸುರಕ್ಷತೆ ತೆರಿಗೆ ಕಟ್ಟಿಸಿಕೊಳ್ಳಬೇಕೇ? ಬೇಡವೇ? ಎಂಬ ಗೊಂದಲ ಇದೆ ಎನ್ನುತ್ತಾರೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net