

ಬೆಂಗಳೂರು: ವಿಭೂತಿಪುರ ವೀರಸಿಂಹಾಸನ ಮಠದಲ್ಲಿ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ನಡೆಯುವ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಜಾತ್ರೆಯು ಅದ್ಧೂರಿಯಾಗಿ ನಡೆಯಿತು.
ಭಾನುವಾರ ಬೆಳಗಿನಿಂದಲೇ ಆರಂಭವಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಸಾಮೂಹಿಕ ಶಿವದೀಕ್ಷಾ, ಶ್ರೀಜಗದ್ಗುರು ರೇಣುಕಾಚಾರ್ಯರ ಮತ್ತು ಬಸವೇಶ್ವರರ ಮೆರವಣಿಗೆಯು ವಿವಿಧ ಜಾನಪದ ಮೇಳಗಳೊಂದಿಗೆ ನಡೆಯಿತು. ಸಂಜೆ ನಡೆದ ಸಮಾರಂಭದಲ್ಲಿ ಭಜನಾ ಕಲಾವಿದ ಆಕಾಶ ಮನುಗೂಳಿಗೆ ಜಾನಪದ ವಿಭೂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸೋಮವಾರ ಬೆಳಗ್ಗೆ ಶ್ರೀವೀರಭದ್ರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಗುಗ್ಗಳ ಸೇವೆ (ಕೆಂಡಾರ್ಚನೆ) ಪುರವಂತರ ವೀರಗಾಸೆ ಸೇವೆ ನಡೆಯಿತು. ಶ್ರೀಮಠದಿಂದ ಆರಂಭವಾದ ವೀರಭದ್ರಸ್ವಾಮಿಯ ರಥೋತ್ಸವದಲ್ಲಿ ವಿವಿದೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಪಾಲ್ಗೊಂಡು ದೇವರ ದರ್ಶನ ಪಡೆದರು. ಮಠದ ಮುಂದಿನ ರಸ್ತೆಯ ಮೂಲಕ ಸಾಗಿದ ರಥೋತ್ಸವವು ಶ್ರೀಜಗದ್ಗುರು ಪಂಚಾಚಾರ್ಯ ಸ್ಮತಿ ಮಂಟಪಕ್ಕೆ ಹೋಗಿ ಮಂಗಲಗೊಂಡಿತು.
ನಂತರ ನಡೆದ ಸಮಾರಂಭದಲ್ಲಿ ಶ್ರೀಮಠದಿಂದ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ‘ಸುವರ್ಣಶ್ರಿ’ ಪ್ರಶಸ್ತಿಯನ್ನು ನಾಡಿನ ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಯ ಅಧ್ಯಕ್ಷ ಸುರೇಶ ವಸಂತ ಪಾಟೀಲ್ ದಂಪತಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ನೊಣವಿನಕೆರೆ ಮಠದ ಡಾ.ಕರಿವೃಷಭ ದೇಶೀಕೇಂದ್ರ ಸ್ವಾಮಿಗಳು ಆಶೀರ್ವಚನ ನೀಡುತ್ತಾ; ವಿಭೂತಿಪುರಮಠ ದಿನಗಳೆದಂತೆ ಅಭಿವೃದ್ಧಿಯನ್ನು ಹೊಂದುತ್ತಿರುವುದರ ಹಿಂದೆ ಮಹಾತಪಸ್ವಿ ಲಿಂಗೈಕ್ಯ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ತಪಸ್ಸು ಮಾಡಿದ ಪುಣ್ಯಭೂಮಿ ಇದು. ಅದರ ಲವಾಗಿ ಶ್ರೀಮಠ ಉತ್ತರೋತ್ತರವಾಗಿ ಬೆಳೆಯುತ್ತಿದೆ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿವಗಂಗೆ ಮತ್ತು ಹುಕ್ಕೇರಿ ಹಿರೇಮಠದ ಶ್ರೀಗಳು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಕಳೆದ 25 ವರ್ಷಗಳಲ್ಲಿ ಮಠವನ್ನು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕೇಂದ್ರವನ್ನಾಗಿ ಮಾರ್ಪಡಿಸಿರುವ ಬಗೆಯನ್ನು ವಿವರಿಸಿದರು.
ಸಮಾರಂಭದಲ್ಲಿ ಕೊಟ್ಟೂರು ಚಾನುಕೋಟಿ ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಕೆರೂರು, ಅಕ್ಕಿಆಲೂರು, ಗುಳೇದಗುಡ್ಡ ಮತ್ತಿತರ ಮಠಗಳ ಶ್ರೀಗಳು, ಮಾಜಿ ಶಾಸಕ ನಂದೀಶ ರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಡಿ.ಕೆ.ಮೋಹನ್, ಬಿಜೆಪಿ ನಾಯಕರಾದ ಗೀತಾ ವಿವೇಕಾನಂದ, ಮಹೇಂದ್ರ ಮೋದಿ, ಶಿವಶರಣಪ್ಪ ಹೂಗಾರ್, ನಾದಭಾಸ್ಕರ ಶಿವಶಂಕರಶಾಸಿ ಮತ್ತಿತರರು ಉಪಸ್ಥಿತರಿದ್ದರು.
-ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ.