

ಮಲ್ಲಿಂಗಧಾರಿಣೋ ಲೋಕೇ ದೇಶಿಕಾ ಮತ್ಪರಾಯಣಾಃ |
ಮದೇಕಶರಣಾಸ್ತೇಷು ಯೋಗ್ಯಂ ನೈವಾನ್ಯಜಂತುಷು ||
ಈ ಲೋಕದಲ್ಲಿ ದೇಹದ ಮೇಲೆ ಶಿವಲಿಂಗ (ಇಷ್ಟ ಲಿಂಗ)ವನ್ನು ಧರಿಸಿ ಶಿವನ ಉಪಾಸನೆಯಲ್ಲಿ ಯಾವಾಗಲೂ ಮಗ್ನನಾಗಿರುವ ಮತ್ತು ಶಿವನಿಗೆ ಮಾತ್ರ ಶರಣಾಗಿರುವ, ಧಾರ್ವಿುಕ ಗುರುಗಳಲ್ಲಿ ಪ್ರಸಾದವನ್ನು ಸ್ವೀಕರಿಸಲು ಯೋಗ್ಯವಾದುದೇ ಹೊರತು, ಯಾರು ಯಾರಿಂದಲೋ ಅದನ್ನು ಸ್ವೀಕರಿಸಬಾರದು. ಪ್ರಸಾದವು ಪರಮ ಪವಿತ್ರವಾದುದು, ಆದರೆ ಅದು ಯಾರಿಂದ ಬರುತ್ತದೆ ಎಂಬುದು ಕೂಡ ಅಷ್ಟೇ ಮಹತ್ವಪೂರ್ಣವಾದುದು. ‘ಅನ್ನಾನುರೂಪಾ ತನುರೂಪವೃದ್ಧಿಃ’ ಎಂಬ ಕಾಳಿದಾಸನ ಹೇಳಿಕೆಯಂತೆ ಅನ್ನಕ್ಕೆ ಅನುಗುಣವಾಗಿ ನಮ್ಮ ದೇಹ ರೂಪ ಮತ್ತು ಮನಸ್ಸುಗಳು ವೃದ್ಧಿ ಹೊಂದುತ್ತವೆ. ಶರಶಯ್ಯೆಯಲ್ಲಿ ಮಲಗಿದ ಭೀಷ್ಮರು ಧರ್ಮದ ಸೂಕ್ಷ್ಮತೆಯನ್ನು ಹೇಳಲು ಪಾಂಡವರನ್ನು ಕರೆದಾಗ ದ್ರೌಪದಿಯು ವ್ಯಂಗ್ಯವಾಗಿ ನನ್ನ ವಸ್ತ್ರಾಪಹರಣದ ಸಂದರ್ಭದಲ್ಲಿ ಧರ್ಮವನ್ನು ಹೇಳಲಿಲ್ಲ, ಈಗ ಹೇಳುತ್ತಿರುವಿರಲ್ಲ ಎಂದು ಕೇಳಿದಾಗ ದುರ್ಯೋಧನನ ಅನ್ನದ ಪ್ರಭಾವದಿಂದ ನನ್ನ ಮನಸ್ಸು ಧರ್ಮವನ್ನು ಮರೆತಿತ್ತು ಎಂದು ಹೇಳುತ್ತಾರೆ. ಇದರಿಂದ ಯಾರಿಂದ ಅನ್ನವನ್ನು ಸ್ವೀಕರಿಸುತ್ತೇವೆ ಎಂಬುದು ಕೂಡ ಅಷ್ಟೇ ಮಹತ್ವಪೂರ್ಣವಾದುದು.
| ಮುಕುಟಾಗಮ (5. 20)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು
ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.