

ಶಿವಮೊಗ್ಗ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಘಟಕಗಳಿದ್ದು, ಭವನ ನಿರ್ಮಿಸಿ ಸಮುದಾಯದ ಮಕ್ಕಳಿಗೆ ಲೋಕಸೇವಾ ಆಯೋಗದ ತರಬೇತಿ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಶಿವಮೊಗ್ಗ ವೀರಶೈವ ಲಿಂಗಾಯತ ಮಹಾಸಭಾದಿಂದ ಗುರುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯವು ಸರ್ವರಿಗೂ ಲೇಸು ಬಯಸುತ್ತದೆ. ನಮ್ಮ ಮಠಮಾನ್ಯಗಳು ಜಾತಿ, ಧರ್ಮವನ್ನು ಮೀರಿ ಅಕ್ಷರ, ಅನ್ನ, ಆಶ್ರಯ ನೀಡಿದ್ದಾರೆ ಎಂದರು.
ನಮ್ಮ ಮಠಮಾನ್ಯಗಳ ಕೊಡುಗೆ ಅಪಾರ. ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ಲಭಿಸಬೇಕು. ಹೀಗಾಗಿ ಎಲ್ಲ ಜಿಲ್ಲಾ ಕೇಂದ್ರದಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಮಹಾಸಭಾ ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಎಚ್.ಸಿ.ಯೋಗೇಶ್, ಸಂತೋಷ್ ಬಳ್ಳೆಕೆರೆ, ಅನಿತಾ ರವಿಶಂಕರ್ ಇತರರಿದ್ದರು.