

ಪ್ರಸ್ತುತ ಎಲ್ಲ ಚಿತ್ರರಂಗಗಳಲ್ಲಿಯೂ ರಿ-ರಿಲೀಸ್ ಟ್ರೆಂಡ್ ಹೆಚ್ಚಾಗಿದೆ. ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯಲು ಇದೀಗ ಹಳೆಯ ಹಿಟ್ ಸಿನಿಮಾಗಳ ಮೊರೆ ಹೋಗುವ ದುಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಕನ್ನಡದಲ್ಲಿ ‘ಉಪೇಂದ್ರ’, ‘ಜಾಕಿ’, ‘ರಾಜಾಹುಲಿ’, ‘ಬಹುದ್ದೂರ್’, ‘ಕರಿಯ’ ಸೇರಿ ಹಲವು ಸಿನಿಮಾಗಳು ರಿ-ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದಿದ್ದವು. ಇನ್ನು, ಬಿ ಟೌನ್ ಮಂದಿ ಕೂಡ ಸಿನಿಮಾಗಳ ರಿ-ರಿಲೀಸ್‌ಗೆ ಮುಂದಾಗುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತೃಪ್ತಿ ದಿಮ್ರಿ ನಟನೆಯ ‘ಲೈಲಾ ಮಜ್ನು’, ರಾಹಿಲ್ ಅನಿಲ್ ಬರ್ವೆ ನಿರ್ದೇಶನದ ‘ತುಂಬಾದ್’ ಚಿತ್ರಗಳು ರಿ-ರಿಲೀಸ್ ಆಗಿದ್ದವು. ಇದೀಗ ಮತ್ತೊಂದು ಹಿಂದಿ ಸಿನಿಮಾ ಮರು ಬಿಡುಗಡೆಯಾಗಿದೆ. ಶಾರುಖ್ ಖಾನ್ ಹಾಗೂ ನಿರ್ದೇಶಕ ಯಶ್ ಚೋಪ್ರಾ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ‘ವೀರ್-ಜಾರಾ’ ಎರಡು ದಶಕಗಳ ಬಳಿಕ ಮತ್ತೆ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ಶಾರುಖ್‌ಗೆ ಪ್ರೀತಿ ಝಿಂಟಾ ಜೋಡಿಯಾಗಿದ್ದರು. ‘ವೀರ್ -ಜಾರಾ’ 2004ರಲ್ಲಿ ಬಿಡುಗಡೆಯಾಗಿ, 97 ಕೋಟಿ ರೂ. ಗಳಿಕೆ ಮಾಡಿತ್ತು. ಇದೀಗ, 20 ವರ್ಷಗಳ ಬಳಿಕ ಸುಮಾರು 282 ಥಿಯೇಟರ್‌ಗಳಲ್ಲಿ ಸಿನಿಮಾ ರಿ-ರಿಲೀಸ್ ಆಗಿದ್ದು, ಮೊದಲ ವಾರ 1.57 ಕೋಟಿ ರೂ. ಹಾಗೂ ಎರಡನೇ ವಾರ ರಾಷ್ಟ್ರೀಯ ಸಿನಿಮಾ ದಿನದಂದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಹೆಚ್ಚಿನ ಕಲೆಕ್ಷನ್ ಮಾಡಿದೆ. ಆ ಮೂಲಕ ಈ ಚಿತ್ರ ಬಿಡುಗಡೆಯಾದಾಗಿನಿಂದ ಈವರೆಗೆ 100 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ. -ಏಜೆನ್ಸೀಸ್