

ತನ್ನ ಬಳಿಯಿರುವುದು ಪರಮಾತ್ಮನ ಕೃಪೆಯಿಂದ. ನಾನೇ ಧನ್ಯ. ಪರಮಾತ್ಮ ನನಗೆ ಜೀವನದಲ್ಲಿ ಸಾಕಷ್ಟು ನೀಡಿದ್ದಾನೆ. ಬೇರೆ ಬಯಸುವ ಅವಶ್ಯಕತೆಯಿಲ್ಲ ಎಂದು ಆತನಿಗೆ ಮನದಟ್ಟಾಗುತ್ತದೆ. ಮಾತ್ರವಲ್ಲ, ಇತರರನ್ನು ಕಂಡಾಗ ಹೃದಯದಲ್ಲಿ ಕನಿಕರ ಉಂಟಾಗುತ್ತದೆ. ಅವರಿಗೆ ಸಹಾಯ ಮಾಡುವ ಮನಸ್ಸೂ ಉಂಟಾಗುತ್ತದೆ. ತಾನಿರುವ ಸ್ಥಳ ಚೆನ್ನಾಗಿದೆ. ನನ್ನ ಇರುವಿಕೆಯಲ್ಲಿ ನಾನು ತೃಪ್ತಿಯಿಂದಿರುವೆ.
ಈ ಭಾವನೆಗಳು ಮನಸ್ಸಿನಲ್ಲಿ ಅಂಕುರವಾದಾಗ ನನ್ನಲ್ಲಿ ಸಾಧಕನ ಜನ್ಮವಾದಂತೆ. ಕೆ.ಎಸ್.ನರಸಿಂಹಸ್ವಾಮಿ ಅವರು ತಮ್ಮ ಒಂದು ಪದ್ಯದಲ್ಲಿ, ‘ಸಿಕ್ಕಿದೂರೇ ಸ್ವರ್ಗ ಸಿಕ್ಕದುದು ನರಕ, ಕೈಬಿಡದು ಈ ಭೂಮಿ ನಮ್ಮನಿರುವನಕ, ದುಃಖಮಯವೇ ಬದುಕು ಎನ್ನುವವ ಕವಿಯೆ?’ ಎಂದಿದ್ದಾರೆ. ಎಷ್ಟು ಸತ್ಯವಿದೆ ಈ ಸಾಲುಗಳಲ್ಲಿ. ನಮ್ಮ ಜೀವನವನ್ನು ನಾವು ಪೂರ್ಣತೆಯಿಂದ ನೋಡಿದರೆ ಅಹಂಕಾರವು ದೂರವಾಗಿ ನಿರಹಂಕಾರವು ನೆಲೆ ನಿಲ್ಲುವುದರಲ್ಲಿ ಸಂಶಯವೇ ಇಲ್ಲ. ನಮ್ಮ ಅಜ್ಞಾನವೇ ನಮ್ಮ ದುಃಖಕ್ಕೆ ಕಾರಣ. ವೇದಾಂತದ ಉಪದೇಶವೇ ಇದು. ದುಃಖ ನಿವೃತ್ತಿ ಹಾಗೂ ಸುಖ ಪ್ರಾಪ್ತಿ. ಅಜ್ಞಾನವೇ ದುಃಖ, ಜ್ಞಾನವೇ ಸುಖ. ಎಂದು ನಾವು ಜ್ಞಾನದತ್ತ ನಮ್ಮ ಹೆಜ್ಜೆಗಳನ್ನು ಇಡುತ್ತೇವೆಯೋ ಅಂದಿನಿಂದಲೇ ನಮ್ಮ ದುಃಖವು ಕಡಿಮೆಯಾಗುತ್ತಾ ಬರುತ್ತದೆ. ಆ ದಾರಿಯಲ್ಲಿ ನಾವುಗಳು ಸಾಗಿ, ಜೀವನವನ್ನು ಸಾರ್ಥಕಗೊಳಿಸಿ, ಜೀವನ್ಮುಕ್ತರಾಗಬೇಕು.