

ನವದೆಹಲಿ: ಶತಕೋಟ್ಯಧಿಪತಿ ಅನಿಲ್ ಅಗರವಾಲ್ ಅವರ ಗಣಿಗಾರಿಕಾ ಕಂಪನಿಯಾದ ವೇದಾಂತ ಲಿಮಿಟೆಡ್ ಬಿಜೆಪಿಗೆ 2024-2025ರಲ್ಲಿ 97 ಕೋಟಿ ರೂ. ದೇಣಿಗೆ ನೀಡಿದ್ದು, ಇದು ಪ್ರತಿ ವರ್ಷದ ದೇಣಿಗೆಗೆ ಹೋಲಿಸಿದರೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಈ ವಿಷಯವನ್ನು ಕಂಪನಿಯೇ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇತರ ಖರ್ಚುಗಳು (ಮಿಸಲೇನಿಯಸ್) ವಿಭಾಗದಡಿ, ರಾಜಕೀಯ ದೇಣಿಗೆಗಳ ಜೊತೆಗೆ ತನ್ನ ಮೂಲ ಕಂಪನಿಯಾದ ಲಂಡನ್ ಲಿಸ್ಟೆಡ್ ವೇದಾಂತ ರಿಸೋರ್ಸಸ್ ಪಿಎಲ್ಸಿಗೆ ಪಾವತಿಸಿದ ನಿರ್ವಹಣೆ ಮತ್ತು ಬ್ರಾಂಡ್ ಶುಲ್ಕದ ಖರ್ಚುಗಳನ್ನೂ ಕಂಪನಿ ಈ ವರದಿಯಲ್ಲಿ ವಿವರಿಸಿದೆ.
2023-24ರಲ್ಲಿ ಎಲ್ಲ ಪಕ್ಷಗಳಿಗೆ ಸೇರಿ ಒಟ್ಟು 97 ಕೋಟಿ ರೂ. ದೇಣಿಗೆ ನೀಡಿದ್ದ ಕಂಪನಿ, 2024-25ರಲ್ಲಿ 157 ಕೋಟಿ ರೂ. ನೀಡಿದೆ. 2023-24ರಲ್ಲಿ ಬಿಜೆಪಿಗೆ 26 ಕೋಟಿ ರೂ. ನೀಡಿದ್ದ ಕಂಪನಿ 2024-25ರಲ್ಲಿ 97 ಕೋಟಿ ರೂ. ನೀಡಿದೆ. ಇದು ಸುಮಾರು 4 ಪಟ್ಟು ಅಧಿಕ. ಇನ್ನೊಂದೆಡೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಗೆ 2023-24ರಲ್ಲಿ 49 ಕೋಟಿ ರೂ. ನೀಡಿದ್ದ ಕಂಪನಿ, 2024-25ರಲ್ಲಿ ಕೇವಲ 10 ಕೋಟಿ ರೂ. ನೀಡಿದೆ. ಬಿಜು ಜನತಾದಳಕ್ಕೆ 25 ಕೋಟಿ ರೂ. (ಹಿಂದಿನ ವರ್ಷ 15 ಕೋಟಿ ರೂ.), ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ 20 ಕೋಟಿ ರೂ. (ಹಿಂದಿನ ವರ್ಷ 5 ಕೋಟಿ ರೂ.) ನೀಡಿದೆ.
ಹಿಂದೆ 457 ಕೋಟಿ ರೂ. ಕೊಟ್ಟಿತ್ತು!: 2022-23ರಲ್ಲಿ ಈ ಕಂಪನಿಯು ರಾಜಕೀಯ ಪಕ್ಷಗಳಿಗೆ ಒಟ್ಟು 155 ಕೋಟಿ ರೂ. ಮತ್ತು 2021-2022ರಲ್ಲಿ 123 ಕೋಟಿ ರೂ. ದೇಣಿಗೆ ನೀಡಿತ್ತು. ಹಿಂದಿನ ದೇಣಿಗೆಗಳ ಫಲಾನುಭವಿಗಳ ವಿವರ ನೀಡಲಾಗಿರಲಿಲ್ಲ. ಚುನಾವಣಾ ಬಾಂಡ್ಗಳ ಮೂಲಕ 2017ರಿಂದ 2022ರವರೆಗೆ ವಿವಿಧ ಪಕ್ಷಗಳಿಗೆ ಒಟ್ಟು 457 ಕೋಟಿ ರೂ. ದೇಣಿಗೆ ನೀಡಿತ್ತು. ಪಕ್ಷಗಳಿಗೆ ಅನಾಮಧೇಯವಾಗಿ ಅನಿಯಮಿತ ಮೊತ್ತವನ್ನು ದೇಣಿಗೆಯಾಗಿ ನೀಡಲು ಚುನಾವಣಾ ಬಾಂಡ್ನಲ್ಲಿ ಅವಕಾಶ ಇತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್ ಅದನ್ನು ಅಸಾಂವಿಧಾನಿಕ ಎಂದು ಬಣ್ಣಿಸಿ ನಿಷೇಧಿಸಿತು.
ವಿವಿಧ ಕಂಪನಿಗಳದ್ದೂ ಇದೆ...: ವೇದಾಂತದ ಜನಹಿತ ಚುನಾವಣಾ ಟ್ರಸ್ಟ್ನಿಂದ ರಾಜಕೀಯ ಪಕ್ಷಗಳಿಗೆ ಈ ದೇಣಿಗೆ ಪಾವತಿಯಾಗುತ್ತದೆ. ಇಂತಹ ಟ್ರಸ್ಟ್ ಇದೊಂದೇ ಅಲ್ಲ. ಇತರ ಕಂಪನಿಗಳೂ ಇಂತಹ ಟ್ರಸ್ಟ್ ರಚಿಸಿಕೊಂಡಿವೆ. ಟಾಟಾದ ಪೋ›ಗ್ರೆಸಿವ್ ಚುನಾವಣಾ ಟ್ರಸ್ಟ್, ರಿಲಯನ್ಸ್ನ ಪೀಪಲ್ಸ್ ಚುನಾವಣಾ ಟ್ರಸ್ಟ್, ಭಾರತಿ ಗ್ರೂಪ್ನ ಸತ್ಯ ಚುನಾವಣಾ ಟ್ರಸ್ಟ್, ಎಂಪಿ ಬಿರ್ಲಾ ಗ್ರೂಪ್ನ ಪರಿವರ್ತನ ಚುನಾವಣಾ ಟ್ರಸ್ಟ್, ಕೆಕೆ ಬಿರ್ಲಾ ಗ್ರೂಪ್ನ ಸಮಾಜ ಚುನಾವಣಾ ಟ್ರಸ್ಟ್ ಇದರಲ್ಲಿ ಸೇರಿವೆ. ಬಜಾಜ್ ಮತ್ತು ಮಹೀಂದ್ರ ಕೂಡ ಚುನಾವಣಾ ಟ್ರಸ್ಟ್ಗಳನ್ನು ಹೊಂದಿವೆ.