ವೇದ ದರ್ಶನ; ಯಮದ್ವಾರದಲ್ಲಿ ನಿಂತ ನಚಿಕೇತ

Sudina 3 Veda Darshana 1
Published on
ಯಮನಿಗೆ ಆಶ್ಚರ್ಯ! ‘‘ಇಂತಹ ವಿಲಕ್ಷಣ ಕುಮಾರನನ್ನು ಪಡೆದ ತಂದೆಯು ಅವನನ್ನು ಯಮಲೋಕಕ್ಕೆ ಹೀಗೆ ಕಳುಹಿಸಬಹುದೇ?’’ ಅಂದರೆ ಯಮಲೋಕಕ್ಕೆ ಕಳುಹಿಸುವ ಉದ್ದೇಶದಿಂದಲೇ ಮಕ್ಕಳನ್ನು ಪಡೆಯುವ ತಂದೆಯೂ ಉಂಟೇ? ಎಂದು ಲೋಕಾಭಿರಾಮವಾದ ಒಂದು ಆಶ್ಚರ್ಯದ ಧ್ವನಿ. ಅಥವಾ ಇಂತಹ ಮೇಧಾಸಂಪನ್ನನಾದ ಮಗನನ್ನು ಹಡೆದದ್ದು ಮಾತ್ರವಲ್ಲದೆ, ಯಮಲೋಕಕ್ಕೆ ಹೋಗುವ ದಾರಿಯನ್ನೂ ಅವನೊಡನೆ ನಡೆದುಕೊಳ್ಳುವ ರೀತಿಯನ್ನೂ ಉಪದೇಶಿಸಿ ಲೋಕೋಪಕಾರ ಮಾಡಿದ ಆ ತಂದೆಯಾದರೂ ಬಹು ಬುದ್ಧಿವಂತನೇ ಸರಿ.

ಏಕೆಂದರೆ ಯಮಲೋಕದಿಂದ ‘‘ಹಿಂತಿರುಗುವ ಮಾರ್ಗವನ್ನೂ’’ ಅವನು ಮಗನಿಗೆ ಉಪದೇಶ ಮಾಡಿದುದಾಗಿ ಯಮನೇ ಹೇಳುತ್ತಾನೆ. ತಂದೆಯು ನಚಿಕೇತನನ್ನು ಯಮಸದನಕ್ಕೆ ಹೋಗಲು ಕೋಪದಿಂದ ಅಪ್ಪಣೆ ಮಾಡುವುದಕ್ಕೂ ಮೊದಲೇ ತಂದೆಗೆ ಮಗನನ್ನು ಮೃತ್ಯುಮುಖದಿಂದ ಈ ಲೋಕಕ್ಕೆ ಪುನಃ ಕರೆಸುವ ಉಪಾಯವೂ ತಿಳಿದಿದ್ದಿತು. ಅದನ್ನು ಅವನು ನಿಶ್ಚಯಿಸಿಯೇ ಇದ್ದನು ಎಂದು ಇದೇ ಸೂಕ್ತದಲ್ಲಿ ಹೇಳಿದೆ. (ಮಂತ್ರ-6).

ಹೀಗೆ ವಾಜಶ್ರವಸ್ಸು ಮಹಾ ಬ್ರಹ್ಮಜ್ಞಾನಿಯಾಗಿದ್ದನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ತಂದೆಗಿಂತ ಮಗನು ಇನ್ನೂ ಹೆಚ್ಚು ಬುದ್ಧಿವಂತನೆಂದರೆ ತಂದೆಯು ದಡ್ಡನೆಂದು ಹೇಳಿದಂತಾಗಲಿಲ್ಲ. ಯಮನು ನಚಿಕೇತನನ್ನು ಕೊಂಡಾಡಲು ಹೊರಟು, ಮೇಲೆ ನಿಂದೆಯಂತೆ ಕಾಣುವ ಮುಂದಿನ ಮಾತುಗಳಲ್ಲಿಯೂ ಅವನ ತಂದೆಯನ್ನೂ ಕೊಂಡಾಡಿರುವುದು ಪ್ರಸಂಗೋಚಿತವೇ ಆಗಿದೆ.

(ಹೀಗೆ ಪ್ರಚಲಿತವಾಗಿರುವ ಒಂದು ತಪ್ಪು ಕಲ್ಪನೆಯನ್ನು ಇಲ್ಲಿ ನಿವಾರಿಸಿದಂತಾಯಿತು. ವಾಜಶ್ರವಸನು ವೇದದಲ್ಲಿ ಕರ್ಮಕಾಂಡಕ್ಕೆ ಗಂಟುಬಿದ್ದವನೆಂದೂ, ಅವನೊಡನೆ, ಜಗಳವಾಡಿ ಯಮಲೋಕಕ್ಕೆ ಹೊರಟು ನಿಂತ ನಚಿಕೇತನು ಜ್ಞಾನಕಾಂಡ ಪ್ರೇಮಿಯೂ, ಕರ್ಮಕಾಂಡ ನಿರಾಸಕ್ತನೂ ಆಗಿದ್ದನೆಂದೂ ಹೇಳುವವರು ಈ ಪ್ರಸಂಗದಲ್ಲಿ ಯಮನೇ ವಾಜಶ್ರವಸ್ಸನನ್ನು ಕೊಂಡಾಡಿರುವುದನ್ನು ಚೆನ್ನಾಗಿ ಗಮನಿಸಬೇಕು.) ಇದಿಷ್ಟೂ ಋಕ್​ಸಂಹಿತೆಯ ವಿಶೇಷ ವಿವರಣೆ.

***

ಇಷ್ಟರಲ್ಲಿ ನಚಿಕೇತನು ಯಮಗೃಹದ ಬಾಗಿಲಿಗೆ ಬಂದಾಗಿದ್ದಿತು. ಅವನ ಮನಸ್ಸಿನಲ್ಲಿ ಯಮಲೋಕವನ್ನು ಕಂಡು ಬಂದ ಕೆಲವು ಭಾವನೆಗಳನ್ನು ಋಕ್ ಸೂಕ್ತದಲ್ಲಿ ಕೊಡಲಾಗಿದೆ. ‘‘ಓಹೋ! ಸುಪ್ರಸಿದ್ಧವಾದ ಯಮಲೋಕವು ಇದೇ ಅಲ್ಲವೆ! ಇದನ್ನು ದೇವತೆಗಳೇ ನಿರ್ವಿುಸಿದರೆಂದು ಎಲ್ಲರೂ ಹೇಳುತ್ತಾರೆ. ಯಮಪ್ರೀತ್ಯರ್ಥವಾಗಿ ಇಗೋ ಇಲ್ಲಿ ಕೊಳಲನ್ನು ಊದುತ್ತಿದ್ದಾರೆ. ಸ್ತೋತ್ರಪಾಠಕರು ಅವನನ್ನು ವಿಶೇಷ ಸ್ತುತಿಗಳಿಂದ ಕೊಂಡಾಡುತ್ತಿದ್ದಾರೆ. ಈ ಸ್ತುತಿಗಳು ಯಮನಿಗೆ ಅಲಂಕಾರಪ್ರಾಯವೆಂಬುದರಲ್ಲಿ ಸಂದೇಹವಿಲ್ಲ.‘‘ (ಮಂತ್ರ-7)

ಅತಿಥಿ ಸತ್ಕಾರ: ಕಠೋಪನಿಷತ್ತಿನಲ್ಲಿ ನಚಿಕೇತನು ಯಮಸದನಕ್ಕೆ ಬಂದಾಗಿನಿಂದ ಅವನು ಅಲ್ಲಿಂದ ಪುನಃ ನಿರ್ಗಮಿಸುವವರೆಗೂ ನಡೆದ ಘಟನೆಗಳನ್ನೆಲ್ಲ ಅತ್ಯಂತ ಗಂಭೀರವೂ, ವಿಸ್ತಾರವೂ, ಮಾರ್ವಿುಕವೂ, ಆದ ರೀತಿಯಲ್ಲಿ ವರ್ಣಿಸಲಾಗಿದೆ. ಯಮನ ಪರಿವಾರದವರು ಇವನನ್ನು ದೂರದಿಂದ ಕಂಡಕೂಡಲೇ ಭಯ ಭಕ್ತಿಗಳಿಂದ ನಡುಗಿ, ಯಮನನ್ನು ಹೀಗೆ ಎಚ್ಚರಿಸುತ್ತಾರೆ:

‘‘ಹೇ ವೈವಸ್ವತನೇ! ನಿನ್ನ ಲೋಕಕ್ಕೆ ನೀನಾಗಿ ಕರೆದುಕೊಂಡು ಬಂದವರನ್ನು ನಾವು ಕಾಣುವುದು ಸಾಮಾನ್ಯ. ಇದೀಗ ತಾನಾಗಿಯೇ ಒಬ್ಬನು ಬರುತ್ತಿರುವುದು ಸೋಜಿಗ! ಇವನು ನಿನ್ನ ಅತಿಥಿ! (ಅಂದರೆ ಇಲ್ಲೇ ಇರಲು ಬಂದವನಲ್ಲ. ಒಂದು ತಿಥಿ ಮಾತ್ರ ಇದ್ದು ಹೋಗಲು ಬಂದವನು): ಮೇಲಾಗಿ ಬ್ರಾಹ್ಮಣ, ಅಥವಾ ಸಾಕ್ಷಾತ್ ಅಗ್ನಿದೇವನೇ ಈ ರೂಪದಿಂದ ನಿನ್ನ ಅರಮನೆಯನ್ನು ಪ್ರವೇಶಿಸಿದ್ದಾನೆ. ಅಘರ್Âಪಾದ್ಯ ಗಳಿಂದ, ತಡಮಾಡದೆ, ಅವನನ್ನು ಉಪಚರಿಸು.’’ ಮುಂದೆ ಸುಪ್ರಸಿದ್ಧ ನಾಚಿಕೇತಾಗ್ನಿಯನ್ನೇ ಇಲ್ಲಿ ನಚಿಕೇತನೊಡನೆ ತಾದಾತ್ಮ್ಯಾವದಿಂದ ಕುರಿತು ಹೇಳಿರುವುದು ಗಮನೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net