ವೇದ ದರ್ಶನ; ಅಶರೀರವಾಣಿ ಎಂದರೇನು?

Sudina 3 Veda Darshana 1
Published on
ಮೂಢರು ‘‘ಶ್ರೀ’’ ಅಥವಾ ‘‘ಲಕ್ಷ್ಮೀ’’ ಎಂದರೆ ‘‘ಹಣದ ರಾಶಿ’’ (Mammon) ಎಂದು ತಿಳಿಯುವರು. ಜೀವನವನ್ನು ಸುಂದರವಾಗಿ, ಸಾರ್ಥಕವಾಗಿ, ಪರಿಪೂರ್ಣವಾಗಿ ಬಾಳಲು ಏನೆಲ್ಲ ಅವಶ್ಯವೋ, ಅವೆಲ್ಲವೂ ‘‘ಶ್ರೀ’’ ಅನುಗ್ರಹವೇ. ಜ್ಞಾನವು ‘‘ಬ್ರಹ್ಮಶ್ರೀ’’, ಜ್ಞಾಪಕವು ‘‘ಮೇಧಾಶ್ರೀ’’, ಆರೋಗ್ಯವು ‘‘ದೈಹಿಕಶ್ರೀ’’. ಹೀಗೆಯೇ ದಾತೃತ್ತ್ವಬುದ್ಧಿ, ಜ್ಞಾನದಾಹ, ಆತ್ಮಾರ್ಪಣೆಯ ಹಂಬಲ, ಮುಮುಕ್ಷಾ, ಪರೋಪಕಾರ ಬುದ್ಧಿ, ಆಸ್ತಿಕ್ಯಭಾವ - ಎಲ್ಲವೂ ‘‘ಶ್ರೀ’’ ಅನುಗ್ರಹದ ರೂಪಾಂತರಗಳು. ಯಾವುದು ಮನುಷ್ಯನನ್ನು ‘‘ಶ್ರೇಯಸ್ಸಿನ’’ ದಾರಿಯತ್ತ ಒಯ್ಯುವುದೋ ಅದು ‘‘ಶ್ರೀ’’ ಅನುಗ್ರಹದಿಂದಲೇ.

(‘ಶ್ರೀ’ ಎಂದರೆ ಶ್ರೇಯಃಕಾರಕಗಳು.) 

ಶ್ರೇಯೋ ನಹ್ಯರವಿಂದಲೋಚನ ಮನಃ ಕಾಂತಾಪ್ರಸಾದಾದೃತೇ |

ಸಂಸೃತ್ಯಕ್ಷರ ವೈಷ್ಣವಾಧ್ವಸು ನೃಣಾಂ ಸಂಭಾವ್ಯತೇ ಕರ್ಹಿಚಿತ್ ||

(ಶ್ರೀ ಯಮುನಾಚಾರ್ಯರು: ಚತುಶ್ಲೋಕೀ-3) ಎಂದು ‘‘ಶ್ರೀ ತತ್ತ್ವ’’ವನ್ನರಿತ ಜ್ಞಾನಿಗಳು ಘೊಷಿಸಿದ್ದಾರೆ. ಸಂಸೃತಿ ಎಂದರೆ ಮೋಕ್ಷ ಹೊರತು ಉಳಿದ ತ್ರಿವರ್ಗಗಳು. (ಧರ್ಮ, ಅರ್ಥ, ಕಾಮಗಳು). ಸಂಸಾರೋಪಯುಕ್ತವಾದ ಐಶ್ವರ್ಯವೆಂದು ಭಾಷ್ಯಕಾರರು ಬರೆಯುತ್ತಾರೆ. ‘‘ಅಕ್ಷರ’’ ಎಂದರೆ ಪರಿಶುದ್ಧ ಆತ್ಮಾನುಭೂತಿಯೆಂದು, ವಿಖ್ಯಾತವಾದ ಕೈವಲ್ಯ ಪದವೀ. ‘‘ವೈಷ್ಣವಾಧ್ವ’’ ಎಂದರೆ ಅರ್ಚಿರಾದಿ ಮಾರ್ಗದಲ್ಲಿ ‘‘ವಿಷ್ಣುಪದ’’ವನ್ನು ಕುರಿತು ಗಮನ. ಈ ರೀತಿ ಐಶ್ವರ್ಯ, ಕೈವಲ್ಯ, ಮೋಕ್ಷಗಳಲ್ಲಿ ನಾವು ಯಾವುದೊಂದನ್ನು ಬಯಸಿದರೂ, ‘‘ಶ್ರೇಯೋ’’ರೂಪವಾದ ಸಿದ್ಧಿಯು, ಅರವಿಂದಲೋಚನನಾದ ಭಗವಂತನ ಮನಃಕಾಂತೆಯಾದ, ಲೋಕಮಾತೆಯಾದ, ಶ್ರೀದೇವಿಯ ಪ್ರಸಾದವಿಲ್ಲದೆ ಎಂದಿಗೂ ಸಂಭವಿಸುವುದಿಲ್ಲವೆಂದು ತಾತ್ಪರ್ಯ.

(ಇದೇ ಕಠೋಪನಿಷತ್ತಿನಲ್ಲೇ ಇನ್ನು ಮುಂದೆ ಯಮನು ನಚಿಕೇತನಿಗೆ ಶ್ರೇಯಸ್ಸಿಗೂ-ಪ್ರೇಯಸ್ಸಿಗೂ ಇರುವ ವ್ಯತ್ಯಾಸವನ್ನೂ, ಶ್ರೇಯಸ್ಸಿನ ಆತ್ಯಂತಿಕ ಸ್ವರೂಪವನ್ನೂ ವಿವರಿಸುತ್ತಾ; ರಥ, ಕುದುರೆ, ಸಾರಥಿ ಇತ್ಯಾದಿಗಳ ಉಪಮಾನದಲ್ಲಿ, ಪಯಣಿಗನಾದ ಮಾನವನು ಹೇಗೆ ಎಚ್ಚರಿಕೆಯಿಂದ ವಿಷ್ಣುಪದವೆಂಬ ಕೊನೆಯ ಲೋಕವನ್ನು ಸೇರುವನೆಂಬುದನ್ನೂ ‘‘ಸೊà—ಧ್ವನಃ ಪರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಂ’’ ಎಂದು ಹೇಳಿರುವುದನ್ನೂ ಇಲ್ಲಿ ಸ್ಮರಿಸಬೇಕು.) ಇಂತಹ ವಿಷ್ಣುಪದಪ್ರಾಪ್ತಿಮಾರ್ಗ, ವಿಷ್ಣುಪದ ಸ್ವರೂಪ, ಪ್ರಾಪ್ತಾ ಆದ ಚೇತನಸ್ವರೂಪ, ಉಪಾಯಸ್ವರೂಪಗಳೆಂಬ ನಿಗೂಢವಾದ ಸಾಂಗ ಬ್ರಹ್ಮವಿದ್ಯೆಯನ್ನು ಪಡೆಯಲು ನಚಿಕೇತನಿಗೆ ಪುರುಷಕಾರ ಸ್ವರೂಪಿಣಿಯಾದ ‘‘ಶ್ರೀ’’ ಅನುಗ್ರಹ ಒದಗಿಬಂದಿತೆಂದು ‘‘ವಾಗ್ದೇವತೆ’’ಯು ಅವನಿಗೆ ಹೇಳಿಕೊಟ್ಟ ಮಾತಿನ ತಾತ್ಪರ್ಯ.

***

ಅಶರೀರವಾಣಿ ಎಂಬುದು ಮಾನವನ ಹೃದಯದ ಅಂತರಾಳದಿಂದ ಭಗವತ್ಪ್ರೇರಿತವಾಗಿ, ಅವನ ಕಿವಿಯ ಮಟ್ಟಿಗೇ ಕೇಳುವಂತೆ ಮಿಡಿಯುವ ಅಂತರ್ವಾಣಿಯೂ ಆಗಬಹುದು. ಸರ್ವವ್ಯಾಪಿಯಾದ ಭಗವಂತನು ನಮ್ಮ ಹೃದಯಾಕಾಶದಲ್ಲೇ ಇದ್ದು ವಿಹರಿಸುವಂತೆ, ಭಗವಂತನನ್ನು ಕ್ಷಣಮಾತ್ರವೂ ಬಿಟ್ಟಿರಲಾರದ ಶ್ರೀದೇವಿಯೂ ಅಲ್ಲೇ ಅವನೊಡನೆಯೇ ಇರುತ್ತಾಳೆ.

ಕರ್ಮಪರಿಪಕ್ವವಾಗಿ ಬ್ರಹ್ಮವಿದ್ಯಾರ್ಹನಾದ ನಚಿಕೇತನಿಗೆ, ‘‘ಪರಮ ಶ್ರೇಯಸ್ಸಿ’’ನ ಮಾರ್ಗವನ್ನು ಪ್ರೇರಿಸಿ, ತಾನೇ ಅವನಿಗೆ ಉಪಯುಕ್ತವಾದ ಮನಸ್ಸಿದ್ಧತೆಯನ್ನು ಮಾಡಿಕೊಟ್ಟಳು ಎಂಬ ಮಾರ್ವಿುಕ ಮಾತಿಗೆ ಅರ್ಥವನ್ನು ಎಷ್ಟು ವಿವರಿಸಿದರೂ ಕಡಿಮೆಯೇ. ಇದಕ್ಕಾಗಿಯೇ ಜ್ಞಾನಿಗಳಾದ ಆಚಾರ್ಯರು ಜಗನ್ಮಾತೆಯನ್ನು ‘‘ಶ್ರೇಯೋಮೂರ್ತಿಂ ಶ್ರಿಯಂ ಅಶರಣಃ ತ್ವಾಂ ಶರಣ್ಯಾಂ ಪ್ರಪದ್ಯೇ’’ ಎಂದು ಕೊಂಡಾಡಿದ್ದಾರೆ. (ಶ್ರೀಸ್ತುತಿ-1. ವೇದಾಂತ ದೇಶಿಕರು).

ಬ್ರಹ್ಮವಿದ್ಯೆಯು ಕಠೋಪನಿಷತ್ತೆಂಬ ಈ ವೇದಪ್ರಕಾರವಾಗಿ, ಯಮನ ಮುಖದಿಂದ ನಚಿಕೇತನನ್ನು ನಿಮಿತ್ತ ಮಾಡಿಕೊಂಡು ಅವತರಿಸಿ, ಲೋಕವನ್ನು ಬೆಳಗಿ ಪಾವನಗೊಳಿಸಲೂ ಸಹ, ಲೋಕದ ಮೇಲೆ, ವಾಗ್ದೇವತೆ ಎನಿಸಿದ ಶ್ರೀಯ ಅನುಗ್ರಹವು ಇಳಿದುಬಂದಿತು ಎಂದೂ ಈ ಪ್ರಕರಣದಿಂದ ಸ್ಪುರಿಸುವುದು.

ಯಮಸದನಕ್ಕೆ ನಚಿಕೇತನು ಯಾವ ಸಾಧನದಿಂದ ಹೋಗಿ ಸೇರಿದನು? ಹೇಗೆ ಹೋದನು? ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಿದರೆ, ಋಕ್ ಸಂಹಿತೆಯಲ್ಲಿ ಮಾರ್ವಿುಕ ಉತ್ತರವಿದೆ: ತನ್ನಲ್ಲಿಗೆ ಬಂದ ಕುಮಾರನನ್ನು ಕಂಡು ವಿಸ್ಮಿತನಾಗಿ ಯಮನೇ ಅವನನ್ನು ಪ್ರಶಂಸಿಸುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net