

ಒಮ್ಮೆ ವಸಿಷ್ಠರು ಮೂರು ದಿನಗಳವರೆಗೆ ಅನ್ನಾದಿಗಳು ದೊರೆಯದೆ ಉಪವಾಸ ಬಾಯಾರಿಕೆಗಳಿಂದ ಬಳಲಿ ನಾಲ್ಕನೆಯ ದಿನ ಏಳಲೂ ಶಕ್ತಿಯಿಲ್ಲದೆ ಬಿದ್ದಿದ್ದಾಗ, ನಾಲ್ಕನೆಯ ರಾತ್ರಿ, ಕೊನೆಗೆ ತಮ್ಮ ತಂದೆಯದಾದ ವರುಣಗೃಹದಲ್ಲಿಯಾದರೂ, ಕದ್ದಾದರೂ, ಅನ್ನವನ್ನು ತಿನ್ನಬೇಕೆಂದು ಸ್ವಪ್ನದಲ್ಲಿಯೇ ಅಲ್ಲಿಗೆ ಹೋದರಂತೆ (ವರುಣಸ್ಯ ಗೃಹಾನ್ ರಾತ್ರೌ ವಸಿಷ್ಠಃ ಸ್ವಪ್ನಮಾಚರನ್...ಬೃಹದ್ದೇವತಾ 6.2). ಆಗ ವರುಣನ ನಾಯಿಯು ಕೊಟ್ಟಿಗೆಯ ಸಮೀಪದಲ್ಲಿ ಮಲಗಿದ್ದದ್ದು, (ಅರ್ಜುನ ಎಂದು ಅದರ ಹೆಸರು. ಸಾತ್ವಿಕ ಶಕ್ತಿಯಾಗಿ ಎಚ್ಚೆತ್ತಿರುವುದರಿಂದ ‘‘ಬಿಳೀ’’ ಎಂಬರ್ಥದ ಈ ಹೆಸರು ಅದಕ್ಕೆ ಉಚಿತವಲ್ಲವೆ?) ಅವರನ್ನು ಕಂಡು ಬೊಗಳುತ್ತದೆ. ಆಗ ವಸಿಷ್ಠರು ಆ ದಿವ್ಯ ‘‘ಶ್ವಾನ’’ಕ್ಕೆ ಉದ್ದೇಶಿಸಿ ಪಠಿಸಿದ ಕೆಲವು ಸುಂದರ ಮಂತ್ರಗಳು ಋಗ್ವೇದದಲ್ಲಿ (7.55.1-2) ಇವೆ.
ಇಲ್ಲಿ ವರ್ಣಿತವಾಗಿರುವುದು ಕೇವಲ ಬೀದಿಯ ನಾಯಿಯಾಗಿದ್ದರೆ, ವೇದದಲ್ಲಿ ಈ ವಿಷಯ ಏಕೆ ಬಂದಿತು ಎನ್ನುವುದಕ್ಕೆ ಉತ್ತರ ಸಿಗಲಾರದು! ಅಲ್ಲದೆ ನಾಯಿಯನ್ನು ‘‘ರೋಗನಾಶಕ’’ನೆಂದೂ, ‘‘ಕಾಮರೂಪಿ’’ ಎಂದೂ ವರ್ಣಿಸಿರುವುದರ ಅರ್ಥವೇನು? ಅನ್ನಾಹಾರಾದಿ ಶುದ್ಧಿಯಿಲ್ಲದೆ ನಿತ್ಯಕರ್ವನುಷ್ಠಾನ ಪೂತರಲ್ಲದ, ಗೋಮಾಂಸ ಭಕ್ಷಕರಾದ ‘‘ವೇದವಿಮರ್ಶಕರಿಗೆ’’ ಇದು ಹೇಗೆ ತಿಳಿಯಬೇಕು? ವಸಿಷ್ಠರೆದುರು ಭಯಾನಕವಾಗಿ ಮೊನಚಾದ ಹಲ್ಲುಳ್ಳ ಬಾಯನ್ನು ತೆರೆದು ಕಚ್ಚಲು ನಿಂತಿರುವ ನಾಯಿಯ ಚಿತ್ರವಿದೆ. ಇದು ಪಾಪವನ್ನೆಸಗಲು ಹೊರಟ ಮಾನವನನ್ನು ತಡೆದು, ನಿಲ್ಲಿಸಿ ‘‘ಬೊಗಳುವ’’, ಅಂತರಂಗದ ‘‘ಜಾಗೃತಿ’’ಯ ಸಂಕೇತವಲ್ಲವೆ? (ರಾತ್ರಿಯಲ್ಲಿ ಎಚ್ಚರವಾಗಿರುವ ನಾಯಿಯು, ನಿದ್ರೆಯಲ್ಲೂ ನಮ್ಮಲ್ಲಿ ಎಚ್ಚೆತ್ತೇ ಇರುವ ಪಾಪ-ಪುಣ್ಯ ಭೀತಿಯೆಂಬ ಶಕ್ತಿಗೆ ಸಮ ಸಂಕೇತವಾಗಲಾರದೆ? ಇದು ರಕ್ಷಕನಾದ ವರುಣನ ಸೇವಕವರ್ಗಕ್ಕೆ ಸೇರಿದ್ದು, ಉಪಕರಣವೆನ್ನುವುದರಲ್ಲಿ ಬಹಳ ಅರ್ಥವಿದೆ.) ಮುಂದಿನ ಇನ್ನೆರಡು ಮಂತ್ರಗಳಲ್ಲಿ ವಸಿಷ್ಠರು, ತಮ್ಮ ಸೂರ್ಯಸಮಾನ ಶಕ್ತಿಯ ಸತ್ಯಬಲದಿಂದ ಕತ್ತಲೆಯಲ್ಲೂ ತಮ್ಮಲ್ಲಿ ‘‘ಸಂಚರಿಸುವ ಪಾಪಶಕ್ತಿಗಳ’’ ಕಣ್ಣು ಮುಚ್ಚಿಸುವುದಾಗಿ ಆಶ್ವಾಸನೆ ಕೊಟ್ಟು ಹಿಂದಿರುಗಿದ ಮೇಲೆಯೇ ‘‘ನಾಯಿಯು’’ ಬೊಗಳುವುದನ್ನು ನಿಲ್ಲಿಸಿತು ಎಂದು ತಿಳಿಯುತ್ತದೆ.