

ಶ್ರೀ ವಸಿಷ್ಠರು ಅಧ್ಯಾತ್ಮವಿದ್ಯೆಯಲ್ಲಷ್ಟೇ ಅಲ್ಲದೆ, ಯುದ್ಧವಿದ್ಯೆ ಯಲ್ಲಿಯೂ ಕುಶಲರಾಗಿರಬಹುದು. ಅವರು ಮಾಡುತ್ತಿರುವ ಯುದ್ಧವರ್ಣನೆಯನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ. ಅಥವಾ ‘ಅಧ್ಯಾತ್ಮವಿದ್ಯಾ ವಿದ್ಯಾನಾಮ್ ಎಂಬ ಗೀತೆಯ ಮಾತಿನಂತೆ ಅಧ್ಯಾತ್ಮವಿದ್ಯೆಯು ಯುದ್ಧವಿದ್ಯೆಯೂ ಸೇರಿದಂತೆ ಎಲ್ಲ ವಿದ್ಯೆಗಳಿಗಿಂತಲೂ ಶ್ರೇಷ್ಠವಾದ, ಎಲ್ಲ ವಿದ್ಯೆಗಳಿಗೂ ರಾಜನಾಗಿ ಇರುವಂಥದ್ದು. ಆದ್ದರಿಂದ ಅಧ್ಯಾತ್ಮವಿದ್ಯೆಯಲ್ಲಿ ಅತಿಶಯ ನಿಷ್ಣಾತರಾಗಿರುವುದರಿಂದ ಶ್ರೀ ವಸಿಷ್ಠರಿಗೆ ಯುದ್ಧವಿದ್ಯೆಯಅರಿವು ಬಂದಿರಬಹುದು.
ಹಿಂದೆ ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಈಗ ವಿದೂರಥನೆಂಬ ಚಕ್ರವರ್ತಿಯಾಗಿ ಜನ್ಮ ಪಡೆದಿದ್ದಾನೆ. ಅವನ ರಾಜಧಾನಿಯ ಸಮೀಪದಲ್ಲಿ ನಡೆಯುತ್ತಿರುವ ಯುದ್ಧವನ್ನು ವಸಿಷ್ಠರು ಶ್ರೀರಾಮನಿಗೆ ವರ್ಣಿಸುತ್ತಿದ್ದಾರೆ. ಶ್ರೀದೇವಿಯ ಕೃಪೆಯಿಂದ ಲೀಲಾಮಹಾರಾಣಿಯು ಸೂಕ್ಷ್ಮರೂಪದಿಂದ ಬಂದು, ಆಕಾಶದಲ್ಲಿದ್ದುಕೊಂಡು ಯುದ್ಧ ದೃಶ್ಯವನ್ನು ನೋಡುತ್ತಿದ್ದಾಳೆ. ಸಾಕಷ್ಟು ಸೈನಿಕರು ಖಾಲಿಯಾದ ನಂತರ ಈಗ ದ್ವಂದ್ವಯುದ್ಧಗಳು ನಡೆಯುತ್ತಿವೆ. ಸಮಾನವಾದ ಆಯುಧಗಳನ್ನು ಧರಿಸಿದವರ ಜೊತೆಯೇ ಯುದ್ಧ ಮಾಡುವುದು ದ್ವಂದ್ವಯುದ್ಧದ ಲಕ್ಷಣ. ದ್ವಂದ್ವಯುದ್ಧದ ವರ್ಣನೆಯ ಸಂದರ್ಭದಲ್ಲಿ ಪ್ರಾಚೀನ ಕಾಲದ ಅನೇಕ ವಿಧದ ಆಯುಧಗಳ ಹೆಸರುಗಳನ್ನು ಪಟ್ಟಿ ಮಾಡಿ ಕೊಟ್ಟಿರುವುದು ವಿಶೇಷವಾಗಿದೆ. ಇದೀಗ ಮುಂದಿನ ಎರಡು ಶ್ಲೋಕಗಳಲ್ಲಿ ದ್ವಂದ್ವಯುದ್ಧದ ವರ್ಣನೆಯನ್ನು ಉಪಸಂಹಾರ ಮಾಡಿ, ಮುಂದೆ ಅಲ್ಲಿ ಸೇರಿರುವ ಎರಡು ಪಕ್ಷಗಳ ರಾಜರುಗಳ ಹೆಸರುಗಳನ್ನು ಪಟ್ಟಿ ಮಾಡಿ ಹೇಳುತ್ತಿದ್ದಾರೆ.
‘ಶ್ರೀರಾಮ! ಆ ಇಡೀ ಆಕಾಶವು ಒಂದು ಸಮುದ್ರದಂತೆ ಪ್ರಕಾಶಿಸುತ್ತಿತ್ತು. ಆ ಸಮುದ್ರಕ್ಕೆ ಚಲಿಸುತ್ತಿರುವ ಚಕ್ರಾಯುಧಗಳೇ ಆವರ್ತ (ಸುಳಿ)ಗಳು. ವ್ಯಾಪಕವಾಗಿ ಸತತ ಸುರಿಮಳೆಯಂತೆ ಪ್ರಯೋಗಿಸಲ್ಪಡುತ್ತಿರುವ ಬಾಣಗಳೇ ಆ ಸಮುದ್ರದ ತುಂತುರು ಹನಿಗಳಿಂದ ತುಂಬಿದ ಗಾಳಿ. ಚಲಿಸುತ್ತಿರುವ ಆಯುಧಗಳೇ ಆ ಸಮುದ್ರದಲ್ಲಿರುವ ಮೊಸಳೆಗಳು. ಹೊಳೆಯುತ್ತಿರುವ ಆಯುಧಗಳ ಸಾಲುಗಳು ತರಂಗಗಳಂತೆ ಕಾಣುತ್ತಿದ್ದು, ಅವುಗಳಿಂದ ಪೀಡಿಸಲ್ಪಟ್ಟ ಸೈನಿಕರು ಆ ತರಂಗಗಳಿಂದ ಪೀಡಿಸಲ್ಪಟ್ಟ ಜಲಚರಗಳಂತೆ ಕಾಣುತ್ತಿದ್ದಾರೆ. ಭೂಮ್ಯಾಕಾಶಗಳ ನಡುವಿನ ಅವಕಾಶದಲ್ಲಿ ತುಂಬಿಕೊಂಡಿರುವ ಈ ಯುದ್ಧಸಮುದ್ರವು ಜೀವಂತ ಇರುವ ಜನರಿಗೆ ದಾಟಿ ಹೊರಬರುವುದೇ ಕಷ್ಟವೋ ಎಂಬಂತೆ ದುಸ್ತರವಾಗಿತ್ತು.’
‘ಯುದ್ಧರಂಗದ ಅರ್ಧಭಾಗದಲ್ಲಿ ವಿದೂರಥನ ಸೇನೆಯು ನಿಂತಿದ್ದರೆ, ಇನ್ನೊಂದು ಅರ್ಧಭಾಗದಲ್ಲಿ ಸಿಂಧುರಾಜನೇ ಮೊದಲಾದ ಸಾಮಂತ ರಾಜರ ಸೇನೆಗಳು ನಿಂತು ಯುದ್ಧ ಮಾಡುತ್ತಿದ್ದವು. ದ್ವಂದ್ವಯುದ್ಧ ನಡೆಯುತ್ತಿರುವುದರಿಂದ ಅದರ ನಿಯಮದಂತೆ ಹೀಗೆ ನಿಂತಿವೆ. ಅಲ್ಲಿ ನಿಂತಿರುವ ಸೈನಿಕರಿಗೆ ವಿದ್ಯೆ, ಬುದ್ಧಿ, ಬಲ, ಶೌರ್ಯ, ಅಸ್ತ್ರಗಳು, ಕುದುರೆಗಳು, ರಥ ಮತ್ತು ಬಿಲ್ಲುಗಳು ಎಂಟು ಸಾಧನಗಳು ಚೆನ್ನಾಗಿ ಇವೆ. ಆದರೂ ಎರಡು ಸೇನೆಗಳ ಸೈನಿಕರು ತುಂಬಾ ಕೋಪಗೊಂಡ ಸ್ಥಿತಿಯಲ್ಲಿದ್ದರು. ಏಕೆಂದರೆ ಆ ಎರಡು ಸೇನೆಗಳ ಪ್ರಮುಖ ನಾಯಕರಾದ ಸಿಂಧುರಾಜ ಮತ್ತು ವಿದೂರಥನು ಕೋಪಗೊಂಡ ಸ್ಥಿತಿಯಲ್ಲಿಯೇ ಇದ್ದರು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ದೇವತಾಜನ್ಮಗಳೆಂದು ಪ್ರಸಿದ್ಧರಾದ ಯಕ್ಷರು, ರಾಕ್ಷಸರು, ಪಿಶಾಚರು ಮತ್ತು ಅಸುರರು ಒಂದೆಡೆ, ಹಾಗೆಯೇ ದೇವ, ಗಂಧರ್ವ, ಕಿನ್ನರ, ವಿದ್ಯಾಧರರು ಇನ್ನೊಂದೆಡೆ ಆಕಾಶ ದಲ್ಲಿ ಯುದ್ಧವನ್ನು ನೋಡಲು ಉತ್ಸುಕರಾಗಿ ನೆರೆದಿದ್ದರು. ಯುದ್ಧ ವನ್ನು ನೋಡುತ್ತಿರುವ ಇವರಲ್ಲಿಯೂ ಎರಡು
ಗುಂಪುಗಳಿವೆ. ಒಂದು ಗುಂಪಿನವರು ವಿದೂರಥನ ಸೈನಿಕರಿಗೆ ಜಯ ಎಂಬುದಾಗಿ ಲೆಕ್ಕಾಚಾರ ಹಾಕುತ್ತಿದ್ದರೆ, ಇನ್ನೊಂದು ಗುಂಪಿನವರು ಸಿಂಧುರಾಜನ ಕಡೆಯ ಸೈನಿಕರಿಗೆ ಜಯವಾಗುವುದೆಂದು ಲೆಕ್ಕ ಹಾಕುತ್ತಿದ್ದರು. ಈ ಲೆಕ್ಕಾಚಾರ ಆಗ್ರಹವಾಗಿ ಬೆಳೆದಿದ್ದರಿಂದ ಎರಡೂ ಗುಂಪಿನವರು ಇನ್ನೊಂದು ಗುಂಪಿನ ಬಗ್ಗೆ ಕುಪಿತರಾಗಿ ನಿಂತಿದ್ದರು. ಜಯ-ಪರಾಜಯಗಳು ರಾಜನ ಅದೃಷ್ಟಕ್ಕೆ ತಕ್ಕಂತೆ ಬರುತ್ತವೆ. ಇಲ್ಲಿ ವಿದೂರಥ ಮತ್ತು ಸಿಂಧುರಾಜರ ಅದೃಷ್ಟಗಳು ಕಾರಣವಾಗುತ್ತವೆ.’
‘ಶ್ರೀರಾಮ! ಈಗ ವಿದೂರಥ (ಹಿಂದಿನ ಜನ್ಮದಲ್ಲಿ ಪದ್ಮಮಹಾರಾಜ) ಮತ್ತು ಸಿಂಧುರಾಜರಿಗೆ ಬೆಂಬಲಿಗರಾಗಿ ನಿಂತಿರುವವರನ್ನು ಮಧ್ಯದೇಶದಿಂದ ಗಣನೆ ಮಾಡುವಾಗ ಪೂರ್ವದಿಕ್ಕಿನಿಂದ ಆರಂಭಿಸಿ ಹೇಳುತ್ತೇನೆ. ಮೊದಲು ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮ (ವಿದೂರಥ) ಮಹಾರಾಜನ ಪಕ್ಷದಲ್ಲಿರುವ ಜನರು ಯಾವ ಯಾವ ಪ್ರದೇಶದವರು ಎಂಬುದನ್ನು ಹೇಳುತ್ತೇನೆ, ಕೇಳು! ಪೂರ್ವ ದಿಕ್ಕಿನಲ್ಲಿ ಕೋಸಲ, ಕಾಶಿ, ಮಗಧ, ಮಿಥಿಲಾ, ಉತ್ಕಲ, ಮೇಖಲ, ಕರ್ಕರ, ಮುದ್ರಾ, ಸಂಗ್ರಾಮಶೌಂಡಕ ಎಂಬ ರಾಜ್ಯಗಳ ಸಂಗ್ರಾಮಶೂರರಾದ ರಾಜರು ಮತ್ತು ಸೈನಿಕರು ಅಲ್ಲಿ
ಸೇರಿದ್ದರು. ಹಾಗೆಯೇ ಮುಖ್ಯ, ಹಿಮ, ರುದ್ರಮುಖ್ಯ, ತಾಮ್ರಲಿಪ್ತ, ಪ್ರಾಗ್ಜ್ಯೋತಿಷ, ವಾಜಿಮುಖ, ಅಂಬಷ್ಠ, ಪುರುಷಾದಕ, ವರ್ಣಕೋಷ್ಠ, ವಿಶ್ವೋತ್ರ, ಆಮಮೀನಾಶನ, ವ್ಯಾಘ್ರವಕ್ತ್ರ, ಕಿರಾತ, ಸೌವೀರ, ಏಕಪಾದಕ ಈ ಎಲ್ಲ 24 ರಾಜ್ಯಗಳ ರಾಜರು, ಸೈನಿಕರು ಸೇರಿದ್ದರು. ಅಲ್ಲದೇ ಮಾಲ್ಯವಂತ, ಶಿಬಿ, ಆಂಜನ, ವೃಷಲಧ್ವಜ, ಪದ್ಮ ಮತ್ತು ಉದಯಗಿರಿ ಎಂಬ ಏಳು ಪರ್ವತ ಪ್ರದೇಶಗಳ ರಾಜರು-ಸೈನಿಕರು ಇದ್ದರು.’
‘ಇನ್ನು ಆಗ್ನೇಯ ದಿಕ್ಕಿನಲ್ಲಿ ವಿಂಧ್ಯಾದಿ ಪ್ರದೇಶಗಳ ನಿವಾಸಿಗಳಾದ ಚೇದಿ, ವತ್ಸ, ದಾಶಾರ್ಣ, ಅಂಗ, ವಂಗ, ಕಲಿಂಗ, ಪುಂಡ್ರ, ಜಠರ, ವಿದರ್ಭ, ಮೇಖಲಗಳಿಂದ ಬಂದವರಿದ್ದರು. ಶಬರಾನನ ವರ್ಣರು, ಕರ್ಣಾತ್ರಿಪುರಪೂರಕರು, ಕಂಟಕಸ್ಥಲ ಎಂಬ ಪ್ರಸಿದ್ಧಿಯುಳ್ಳವರು, ಬೇರೆ ಬೇರೆ ದ್ವೀಪಗಳಿಂದ ಬಂದ ಕೋಮಲ ಎಂಬ ಜನಾಂಗದವರು ಇದ್ದರು. ಕರ್ಣ (ಕರ್ಣಾಟಕ), ಆಂಧ್ರ, ಚೌಳಿಕ (ಚೋರದೇಶದವರು) ಮತ್ತು ಚರ್ಮಣ್ವತೀ ನದೀ ಪ್ರದೇಶದವರು ಅವನ ಪಕ್ಷದಲ್ಲಿದ್ದರು. ಕಾಕಕ, ಹೇಮಕುಡ್ಯ, ಶ್ಮಶ್ರುಧರರು ಮತ್ತು ಬಲಿಗ್ರೀವ, ಮಹಾಗ್ರೀವ, ಕಿಷ್ಕಿಂಧ ಮತ್ತು ನಾಲಿಕೇರಿಗಳು ಇವಿಷ್ಟು (ಒಟ್ಟೂ 27) ರಾಜರು ಮತ್ತು ಸೈನಿಕರು ಆಗ್ನೇಯ ದಿಕ್ಕಿನಿಂದ ಬಂದವರಿದ್ದರು.