ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೋಗಳು ಬಹಿರಂಗ

Vasishta Simha - Haripriya Engagement 1
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಹೊಸ ಲವ್​ಬರ್ಡ್ಸ್​ ಆಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ನಿಶ್ಚಿತಾರ್ಥ ಶುಕ್ರವಾರ ನಡೆದಿತ್ತು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ, ಅದಕ್ಕೆ ಪೂರಕವಾಗಿ ಯಾವುದೇ ಪುರಾವೆಗಳಿರಲಿಲ್ಲ. ಈಗ ಈ ನಿಶ್ಚಿತಾರ್ಥದ ಫೋಟೋಗಳು ಕೊನೆಗೂ ಬಹಿರಂಗವಾಗಿವೆ.

ಈ ನಿಶ್ಚಿತಾರ್ಥದಲ್ಲಿ ಎರಡೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗಿದ್ದು, ಈ ನಿಶ್ಚಿತಾರ್ಥದ ಒಂದಿಷ್ಟು ಫೋಟೋಗಳು ಈಗ ವೈರಲ್​ ಆಗುತ್ತಿವೆ.

ಕಳೆದ ಕೆಲವು ದಿನಗಳಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯ ಬಗ್ಗೆ ಸುದ್ದಿ ಕೇಳಿ ಬರುತ್ತಿತ್ತು. ಆದರೆ, ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿರಲಿಲ್ಲ. ಎಷ್ಟೇ ಚರ್ಚೆಗಳಾದರೂ, ಇಬ್ಬರೂ ಸುಮ್ಮನೆ ಇದ್ದರು. ಹಾಗಾಗಿ, ಸುದ್ದಿ ನಿಜವೋ, ಸುಳ್ಳೋ ಅಥವಾ ಹೊಸ ಚಿತ್ರಕ್ಕಾಗಿ ಮಾಡುತ್ತಿರುವ ಪ್ರಚಾರವೋ ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಹೀಗಿರುವಾಗಲೇ ಶುಕ್ರವಾರ ರಾತ್ರಿ, ಸೋಷಿಯಲ್​ ಮೀಡಿಯಾದಲ್ಲಿ ಹರಿಪ್ರಿಯಾ ಒಂದು ಪೋಸ್ಟ್​ ಹಾಕಿದ್ದರು. ಸಿಂಹದ ಕೈಯಲ್ಲಿ ಹೆಣ್ಣು ಮಗುವೊಂದು ಇರುವಂಥ ಫೋಟೋ ಅದು. ಅದರ ಜತೆಗೆ ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ...' ಎಂಬ ಶೀರ್ಷಿಕೆ ಇತ್ತು. ಅದನ್ನು ನೋಡಿ, ಅವರ ಮತ್ತು ವಸಿಷ್ಠ ಸಿಂಹರ ನಡುವೆ ಕೇಳಿಬರುತ್ತಿದ್ದ ಸುದ್ದಿಗಳು ನಿಜ ಎನ್ನುವಂತಿತ್ತು.

ಶನಿವಾರ, ಅದೇ ಫೋಟೋವನ್ನು ವಸಿಷ್ಠ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, 'ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ...' ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ, ಅವರು ಹರಿಪ್ರಿಯಾ ಅವರನ್ನು ವರಿಸುವುದು ಪಕ್ಕಾ ಆಗಿದೆ. ಈಗ ಎಂಗೇಜ್​ಮೆಂಟ್​ನ ಫೋಟೋಗಳೇ ಬಹಿರಂಗವಾಗಿರುವುದರಿಂದ, ಸಿಂಹ ಮತ್ತು ಹರಿಪ್ರಿಯಾ ನಡುವಿನ ಸುದ್ದಿ ಕೇವಲ ಊಹಾಪೋಹ ಅಥವಾ ಗಾಳಿಸುದ್ದಿಯಲ್ಲ ಎಂದು ಸಾಬೀತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net