

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ನಿಶ್ಚಿತಾರ್ಥದ ಫೋಟೋಗಳು ಬಹಿರಂಗವಾಗುವವರೆಗೂ, ಇಬ್ಬರೂ ತಮ್ಮ ಸಂಬಂಧದ ಕುರಿತು ಸ್ಪಷ್ಟವಾಗಿ ಮಾತನಾಡಿರಲಿಲ್ಲ. ಅವರಿಬ್ಬರೂ ಮದುವೆಯಾಗುತ್ತಿರುವ ಬಗ್ಗೆ ಯಾವುದೇ ಅಧಿಕೃತ ಮುದ್ರೆ ಒತ್ತಿರಲಿಲ್ಲ. ಈಗ ಕೊನೆಗೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರೂ ತಾವು ಒಂದಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮುಂದೆ ತಾವಿಬ್ಬರೂ ಸಿಂಹ ಪ್ರಿಯಾ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯ ಬಗ್ಗೆ ಸುದ್ದಿ ಕೇಳಿ ಬರುತ್ತಿತ್ತು. ಆದರೆ, ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿರಲಿಲ್ಲ. ಎಷ್ಟೇ ಚರ್ಚೆಗಳಾದರೂ, ಇಬ್ಬರೂ ಸುಮ್ಮನೆ ಇದ್ದರು. ಹಾಗಾಗಿ, ಸುದ್ದಿ ನಿಜವೋ, ಸುಳ್ಳೋ ಅಥವಾ ಹೊಸ ಚಿತ್ರಕ್ಕಾಗಿ ಮಾಡುತ್ತಿರುವ ಪ್ರಚಾರವೋ ಎಂಬ ಗೊಂದಲ ಎಲ್ಲರಲ್ಲೂ ಇತ್ತು.
ಹೀಗಿರುವಾಗಲೇ ಶುಕ್ರವಾರ ರಾತ್ರಿ, ಸೋಷಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಒಂದು ಪೋಸ್ಟ್ ಹಾಕಿದ್ದರು. ಸಿಂಹದ ಕೈಯಲ್ಲಿ ಹೆಣ್ಣು ಮಗುವೊಂದು ಇರುವಂಥ ಫೋಟೋ ಅದು. ಅದರ ಜತೆಗೆ ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ...' ಎಂಬ ಶೀರ್ಷಿಕೆ ಇತ್ತು. ಅದಕ್ಕೆ ಸರಯಾಗಿ ಶನಿವಾರ, ಅದೇ ಫೋಟೋವನ್ನು ವಸಿಷ್ಠ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, 'ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ...' ಎಂದು ಬರೆದುಕೊಂಡಿದ್ದರು.
ಇಷ್ಟೆಲ್ಲ ಆಗುತ್ತಿದ್ದರೂ ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರುವುದು ಮತ್ತು ಮದುವೆಯಾಗುತ್ತಿರುವುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿರಲಿಲ್ಲ. ಹೀಗಿರುವಾಗಲೇ, ಅವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡವು. ಯಾವಾಗ, ಈ ಫೋಟೋಗಳು ಬಹಿರಂಗವಾದವೋ, ಆಗ ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ಇನ್ನು ಮುಂದೆ ನಾವು ಸಿಂಹಪ್ರಿಯಾ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಕುರಿತು ಇತ್ತೀಚೆಗೆ ಕೇಳಿಬಂದ ಸುದ್ದಿಗಳೆಲ್ಲ ನಿಜ ಎಂದು ಸ್ಪಷ್ಟಪಡಿಸಿದ್ದಾರೆ.