

ಬೆಂಗಳೂರು: ವಾಸನ್ ಐ ಕೇರ್ ಸಂಸ್ಥಾಪಕ ಎ.ಎಂ. ಅರುಣ್ (51) ಸೋಮವಾರ ನಿಗೂಢವಾಗಿ ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಸಾವಿನ ಕುರಿತು ಸಂಬಂಧಿಕರು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅರುಣ್ ಸಾವಿನ ಬಗ್ಗೆ ಸಂಬಂಧಿಕರು ಆತ್ಮಹತ್ಯೆ ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಚೆನ್ನೈನ ತೇನ್ಯಂಪೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಸಹಜ ಸಾವಾಗಿದ್ದು, ಆತ್ಮಹತ್ಯೆ ಅಥವಾ ಕೊಲೆ ಕುರಿತು ಯಾವುದೇ ಸುಳಿವು ಕಾಣಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅರುಣ್ ಅವರಿಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಜತೆ ನಿಕಟ ಸಂಬಂಧವಿದೆ. ಅಲ್ಲದೆ ಚಿದಂಬರಂ ತಮ್ಮ ಬ್ಲ್ಯಾಕ್ ಮನಿ ವೈಟ್ ಮಾಡಲು ವಾಸನ್ ಐ ಕೇರ್ ಸಂಸ್ಥೆಯನ್ನು ಬಳಸಿಕೊಂಡು ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪವೂ ಇದೆ. 2015ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಚೆನ್ನೈನಲ್ಲಿರುವ ಅರುಣ್ ಮನೆ ಹಾಗೂ ಮೈಲಾಪುರದಲ್ಲಿರುವ ವಾಸನ್ ಐ ಕೇರ್ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯ ಕೂಡ ಸಂಸ್ಥೆಯ ಆರ್ಥಿಕ ಚಟುವಟಿಕೆಗಳನ್ನು ಪರಿಶೀಲಿಸಿತ್ತು. ಈ ಹಿನ್ನೆಲೆಯಲ್ಲಿ ಇವರ ಸಾವು ಹಾಗೂ ಸಂಬಂಧಿಕರ ಅನುಮಾನ ಎಲ್ಲ ಸೇರಿ ಪ್ರಕರಣದ ಕುರಿತು ಕುತೂಹಲ ಉಂಟಾಗಿದೆ. (ಏಜೆನ್ಸೀಸ್)