ವಿಎಗಳಿಗೆ ಕೂರಲು ಸ್ಥಳವೇ ಇಲ್ಲ!

VA story
ಹಳ್ಳಿಯೊಂದರಲ್ಲಿ ಶಿಥಿಲಾವಸ್ಥೆಯಲ್ಲಿರುವ ಗ್ರಾಮ ಲೆಕ್ಕಿಗರ ಕಚೇರಿ.
Published on

ಹೊಳೆಹೊನ್ನೂರು: ಗ್ರಾಪಂ ಆಡಳಿತ ಹಾಗೂ ಕಂದಾಯ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಕಂದಾಯ ಅಧಿಕಾರಿಗಳಿಗೆ ಗ್ರಾಮೀಣ ಹಳ್ಳಿಗಳಲ್ಲಿ ಕೂರಲು ಸ್ಥಳ ಇಲ್ಲದಂತಾಗುತ್ತಿದೆ. ಕಚೇರಿ ಸಮಸ್ಯೆಯ ಕಾರಣ ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳ ಕಡೆ ಆಗಮಿಸದಿರುವ ಕಾರಣ ಜನರು ಪರದಾಡುವಂತಾಗಿದೆ.

ಹಳ್ಳಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸಿಗದ ಕಾರಣ ಹಳ್ಳಿಗರು ಕಂದಾಯ ಅಧಿಕಾರಿಗಳನ್ನು ಹುಡುಕಿಕೊಂಡು ನಾಡ ಕಚೇರಿಗಳನ್ನು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಕಚೇರಿಗಳಲ್ಲೇ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಜನರಿಗೆ ಸಿಗುತ್ತಿದ್ದರು. ಗ್ರಾಪಂನಲ್ಲಿ ಯಾವುದಾರೊಂದು ಕಟ್ಟಡವನ್ನು ಗ್ರಾಮ ಲೆಕ್ಕಿಗರಿಗೆಂದು ನೀಡಲಾಗುತ್ತಿತ್ತು. ಬಹುತೇಕ ಹಳ್ಳಿಗಳಲ್ಲಿ ಕಂದಾಯ ಅಧಿಕಾರಿಗಳಿಗೆಂದು ನೀಡಿದ ಕಚೇರಿಗಳು ದುರಸ್ತಿ ಆಗದಿರುವುದು ಸಮಸ್ಯೆ ಉಂಟಾಗಿದೆ.

ಕೆಲವೆಡೆ ಶಿಥಿಲಾವಸ್ಥೆ ತಲುಪಿದ ಕಟ್ಟಡಗಳಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಾಗದ ಕಾರಣ ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮೀಣ ಕಚೇರಿಗಳತ್ತ ಆಗಮಿಸುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಗುರುತಿಸಲ್ಪಟಿದ್ದ ಸ್ಥಳದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಲಭ್ಯವಾಗದೇ ಇರುವುದು ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗಿದೆ.

ಕಂದಾಯ ಪಾವತಿ ಸೇರಿ ಇಲಾಖೆಯ ಸಣ್ಣಪುಟ್ಟ ಕೆಲಸಗಳಿಗೂ ಗ್ರಾಮ ಲೆಕ್ಕಾಧಿಕಾರಿಗಳಿಗಾಗಿ ನಾಡ ಕಚೇರಿಯನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕಾರಣಾಂತರಗಳಿಂದ ಲೆಕ್ಕಾಧಿಕಾರಿಗಳು ನಾಡಕಚೇರಿಗಳಲ್ಲಿ ಸಿಗದಿದ್ದರೆ ಸಾರ್ವಜನಿಕರ ಅಂದಿನ ಸಮಯ ವ್ಯರ್ಥವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ರಜೆಹಾಕಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಕೆಲಸ ಮಾಡಿಸಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ಹೊಸದಾಗಿ ನೇಮಕವಾಗುವ ಗ್ರಾಮಲೆಕ್ಕಿಗರು ಗ್ರಾಮಗಳತ್ತ ಸುಳಿಯುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳೇ ದೂರುತ್ತಾರೆ. ಗ್ರಾಮಗಳಲ್ಲೂ ಇರದೆ, ಸಂಬಂಧಿಸಿದ ನಾಡ ಕಚೇರಿಗಳಲ್ಲೂ ಸಿಗದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಕೆಲ ಮಹಿಳಾ ಗ್ರಾಮ ಲೆಕ್ಕಿಗರಿಗೆ ತಮ್ಮ ಗ್ರಾಮದ ಗಡಿ ವ್ಯಾಪ್ತಿಗಳ ಬಗ್ಗೆ ಮಾಹಿತಿ ಇಲ್ಲ. ಕೆಲವೆಡೆಗಳಲ್ಲಿ ಅಧಿಕಾರಿ ಹಾಗೂ ಗ್ರಾಮಸ್ಥರ ಮಧ್ಯೆ ಸೇತುವೆಯಾಗಿ ಗ್ರಾಮ ಸೇವಕರೇ ಎಲ್ಲವನ್ನೂ ಸರಿದೂಗಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಿಗರಿಲ್ಲದೆ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುವುದಿಲ್ಲ ಎನ್ನುವಂತಾಗಿದೆ.

ಗ್ರಾಮ ಲೆಕ್ಕಿಗರ ಕೊರತೆ:ಗ್ರಾಮ ಲೆಕ್ಕಿಗರು ಹಳ್ಳಿಗಳಲ್ಲಿರದ ಕಾರಣ, ಅಧಿಕಾರಿಗಳಿಗೆ ಹಳ್ಳಿಯ ಜನರ ಪರಿಚಯ ಇರುವುದೇ ಇಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡು ಕೆಲವರು ಅನಧಿಕೃತವಾಗಿ ತಿದ್ದುಪಡಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ವಂಶವೃಕ್ಷ, ಜಂಟಿಖಾತೆ, ಪೌತಿ ಖಾತೆ ಬದಲಾವಣೆ ಸಮಸ್ಯೆಗಳು ತಲೆದೋರುತ್ತಿವೆ. ವಂಶವೃಕ್ಷ ನೀಡುವ ವಿಚಾರದಲ್ಲಿ ಅನೇಕ ಬಾರಿ ಜನರು ಸಮಸ್ಯೆ ತೆಗೆದುಕೊಂಡು ಸಂಬಂಧಪಟ್ಟ ತಹಸೀಲ್ದಾರ್‌ಗಳ ಬಳಿ ಹೋಗಿ ಸರಿಪಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಹತ್ತಾರು ವರ್ಷಗಳಿಂದ ತಾಲೂಕಿನ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಕೊರತೆ ಕಾಡುತ್ತಿದೆ.

ತಾಲೂಕಿಗೆ ಸುಮಾರು 42 ಜನ ಗ್ರಾಮ ಲೆಕ್ಕಿಗರ ಅವಶ್ಯವಿದೆ. ಆದರೆ ಹಾಲಿ 23 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಲೆಕ್ಕಿಗನಿಗೆ 2-3 ವೃತ್ತಗಳ ಕರ್ತವ್ಯ ನೀಡಲಾಗಿದೆ. ಬಗರ್‌ಹುಕುಂ, ಸರ್ಕಾರಿ ಹಾಗೂ ಖಾಸಗಿ ವ್ಯಾಜ್ಯಾಗಳ ಸ್ಥಳ ಪರಿಶೀಲನೆ ಮಾಡುವುದು ಸೇರಿ ಕಂದಾಯ ಇಲಾಖೆಯ ಕೆಲಸಗಳ ಹೆಚ್ಚುವರಿ ಹೊರೆ ಲೆಕ್ಕಿಗರ ಮೇಲಿದೆ. ಗ್ರಾಮ ಲೆಕ್ಕಿಗರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಭದ್ರಾವತಿ ತಹಸೀಲ್ದಾರ್ ಪರಶುರಾಮ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net