ಡಿ.ರೂಪಾ ವಿರುದ್ಧ ದೂರು ನೀಡಿದ್ದ ವರ್ತಿಕಾ ಕಟಿಯಾರ್ ಎತ್ತಂಗಡಿ

IPS
Published on

ಬೆಂಗಳೂರು: ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದ ಐಜಿಪಿ ಡಿ. ರೂಪಾ ಅವರ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ್ದ ಬೆನ್ನಲ್ಲೇ ಐಎಸ್‌ಡಿ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಸೋಮವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ತಿಕಾ ಕಟಿಯಾರ್ ಅವರನ್ನು ಐಎಸ್‌ಡಿಯಿಂದ ರಾಜ್ಯ ಗೃಹ ರಕ್ಷಕ ದಳ ಹಾಗೂ ಸಿವಿಲ್ ಡಿಫೆನ್ಸ್ ಡಿಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಐಎಸ್‌ಡಿಯಲ್ಲಿ ಐಜಿಪಿಯಾಗಿರುವ ಡಿ. ರೂಪಾ ಅವರು ಕೆಳಹಂತದ ಸಿಬ್ಬಂದಿ ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್ ಅವರನ್ನು ಬಳಸಿಕೊಂಡು ಕಂಟ್ರೋಲ್ ರೂಮ್‌ನಿಂದ ಕೀ ತಂದು ನನ್ನ ಕೊಠಡಿ ತೆರೆದು, ಅತೀಕ್ರಮ ಪ್ರವೇಶಿಸಿ ಕೆಲ ದಾಖಲೆಗಳನ್ನು ಇರಿಸಿದ್ದರು. ಅವುಗಳನ್ನು ದುರುದ್ದೇಶದಿಂದ ಫೋಟೋ ತೆಗೆಸಿ, ವಾಟ್ಸ್‌ಆ್ಯಪ್ ಮೂಲಕ ಪಡೆದುಕೊಂಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ಆರೋಪ ಮಾಡಿದ್ದರು. ಈ ಸಂಬಂಧ ರಾಜ್ಯ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net