ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ವಸತಿ ಶಾಲೆ ನೌಕರರಿಂದ ಮನವಿ ಸಲ್ಲಿಕೆ

25-RNR-03
Published on
ಹಾವೇರಿ: ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ, ನಗದು ರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

ಕೆಸ್​ ಅಡಿಯಲ್ಲಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳಿಗಾಗಿ ರಾಜ್ಯಮಟ್ಟದ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈ ಹೋರಾಟ ವಿವಿಧ ಹಂತಗಳಲ್ಲಿ ನಡೆಯಲಿದ್ದು, ಮೇ 26ರಿಂದ 28ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಈ ಅವಧಿಯಲ್ಲಿ ಸರ್ಕಾರವು ವಸತಿ ಶಾಲೆಗಳ ನೌಕರರ ಬೇಡಿಕೆಗಳ ಕುರಿತು ಸ್ಪಂದಿಸದೆ ಹೋದಲ್ಲಿ ಮೇ 29ರಿಂದ ಜಿಲ್ಲಾ ಹಂತದಲ್ಲಿ ಸತ್ಯಾಗ್ರಹ ಮುನ್ನಡೆಸಲಿದ್ದಾರೆ. ಅದರಂತೆ ಮೇ 29ರಂದು ಆಯಾ ವಸತಿ ಶಾಲೆಗಳಲ್ಲಿ ಸಿಬ್ಬಂದಿ ತಮ್ಮ ಕೈಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಿದ್ದಾರೆ. ಮೇ 30ರಂದು ತರಗತಿಗಳನ್ನು ಬಹಿಷ್ಕರಿಸಿ ಅಸಹಕಾರ ವ್ಯಕ್ತಪಡಿಸುವುದು, ಮೇ 31ರಂದು ಆಯಾ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮೂಲಕ ಸಾಗಿ ಮನವಿ ಸಲ್ಲಿಸುವುದು. ಇದಕ್ಕೆ ಸ್ಪಂದಿಸದೆ ಹೋದಲ್ಲಿ ಜೂ. 2ರಿಂದ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಥವಾ ಆಯಾ ವಸತಿ ಶಾಲೆಗಳ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ರಮಾ ಗಲಗಲಿ, ಪದಾಧಿಕಾರಿಗಳಾದ ವಿರೇಶ ಮರಿಗೌಡ್ರ, ಮಲ್ಲಯ್ಯ ಇಂಗಳಗಿಮಠ, ಮಂಜುನಾಥ ಮಲ್ಲಪ್ಪನವರ, ಸಲೀಂಮಲಿಕ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net