ಸಂಪತ್ತಿನ ಅಧಿದೇವತೆ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಜನಜಂಗುಳಿ : ಹೂವು ಹಣ್ಣಿಗೆ ಡಿಮ್ಯಾಂಡ್

IMG_20230823_182151.jpg
Published on

ಬೆಳಗಾವಿ : ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆಯ ನಡುವೆಯೂ ಗುರುವಾರ ಮಾರುಕಟ್ಟೆಗಳಲ್ಲಿ ಜನದಟ್ಟನೆ ಹೆಚ್ಚಾಗಿತ್ತು. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ತಾಲೂಕು ಮಟ್ಟದ ಪಟ್ಟಣಗಳ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.

 ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮೀ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮಹಿಳೆಯರು, ಹಬ್ಬವನ್ನು ಸಡಗರದಿಂದ ಆಚರಿಸಲು ಸಿದ್ದತೆ ನಡೆಸಿದ್ದು, ಹೂವು, ಮಾಲೆ ಹಾಗೂ ಹಣ್ಣುಗಳು ಸೇರಿದಂತೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು, ರಂಗೋಲಿ ಖರೀದಿಗೆ ಮುಗಿ ಬೀಳುತ್ತಿದ್ದರು.


ಹೂವು-ಹಣ್ಣಿನ ವ್ಯಾಪಾರಿಗಳಿಗೆ ಈ ಹಬ್ಬ ಮಹತ್ವದ್ದಾಗಿದೆ. ಮಾರುಕಟ್ಟೆಯಲ್ಲಿ ಎಲೆ ಹಾಗೂ ಲಿಂಬು ಹಣ್ಣಿನ ಬೆಲೆಯೂ ಹೆಚ್ಚಾಗಿದ್ದು. ವ್ಯಾಪಾರಸ್ಥರು ವಸ್ತುಗಳ ಬೆಲೆ ಕೂಗಿ ಕೂಗಿ ಗ್ರಾಹಕರನ್ನು ಕರೆದರೂ ಖರೀದಿಯಲ್ಲಿ ಚೌಕಾಸಿ ಮಾಡುವಲ್ಲಿ ಮಹಿಳೆಯರು ನಿರತರಾಗಿದ್ದರು.  ಇದರಿಂದಾಗಿ ಹಬ್ಬದ ಸಂಭ್ರಮ ಮಾರುಕಟ್ಟೆಗೂ ಜೀವಕಳೆ ಬಂದಿದೆ.

ಗ್ರಾಮೀಣ ಪ್ರದೇಶದ ಜನತೆ ಬೈಲಹೊಂಗಲ, ಸವದತ್ತಿ, ಕಿತ್ತೂರು, ಖಾನಾಪುರ, ರಾಯಬಾಗ, ಚಿಕ್ಕೋಡಿ, ಸಂಕೇಶ್ವರ, ಹುಕ್ಕೇರಿ ಹಾಗೂ ಗೋಕಾಕ್ ಸೇರಿದಂತೆ ಬೆಳಗಾವಿಗೆ  ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಆಗಮಿಸಿ, ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ವರಮಹಾಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸುವ ಮಹಿಳೆಯರು ಪೂಜಾ ಸಮಾಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ನಗರದ ಗಣಪತಿ ಗಲ್ಲಿ, ಪಾಂಗುಳಗಲ್ಲಿ, ಮಾರುತಿಗಲ್ಲಿ, ಬಾಪಟಗಲ್ಲಿಯ ನಾವೆಲ್ಟಿಸ್ ಮಳಿಗೆಗಳಿಗೆ ತೆರಳಿ ಖುಷಿ ಖುಷಿಯಾಗಿ ಕೊಂಡುಕೊಳ್ಳುವಲ್ಲಿ ತಲ್ಲೀನರಾಗಿದ್ದರು.  

ಸಂಜೆ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಪ್ರಮುಖ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಭಾರಿ ವಾಹನಗಳ ಓಡಾಟ ನಿರ್ಬಂಧಿಸಿ, ಸಂಚಾರ ನಿರ್ವಹಣೆಗೆ ಹೆಚ್ಚಿನ ಪೊಲೀಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿತ್ತು. ವಾಹನದಟ್ಟಣೆ ಹೆಚ್ಚಾಗಿದ್ದರಿಂದ ಪೊಲೀಸರು ಸಂಚಾರ ಸುಗಮಗೊಳಿಸುವಲ್ಲಿ ಹರಸಾಹಸ ಪಡುತ್ತಿರುವುದು ಕಂಡು ಬಂದಿತು.

ಭರ್ಜರಿ ಹೂವು ವ್ಯಾಪಾರ
 ಪೂಜೆಗೆ ಅತ್ಯಗತ್ಯವಾಗಿರುವ ಬಾಳೆಗಿಡಕ್ಕೆ ಅವುಗಳ ಗಾತ್ರಕ್ಕೆ ತಕ್ಕಂತೆ 50 ರಿಂದ 400 ರೂ.ಗಳಿಗೆ ಜೋಡಿ, ಬೂದ ಕುಂಬಳಕಾಯಿ ಕೆಜಿಗೆ 30 ರೂ.(ಗಾತ್ರಕ್ಕೆ ತಕ್ಕಂತೆ 50 ರಿಂದ 200 ರೂ) ತೆಂಗಿನಕಾಯಿ ಒಂದಕ್ಕೆ 30 ರೂ., ಮಾವಿನ ತೋರಣ ಹಾಗೂ ತುಳಸಿ 5ರಿಂದ 15 ರೂ., ಏಲಕ್ಕಿ ಬಾಳೆ ಕೆ.ಜಿಗೆ 85 ರೂ. ಪಚ್ಚ ಬಾಳೆ ಡಜನ್‌ಗೆ 40 ರಿಂದ 60ರೂ.ವರೆಗೆ ಮಾರಾಟ ಮಾಡಿದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net