

ಶಿವಮೊಗ್ಗ: ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಸಡಗರ, ಸಂಭ್ರಮದಿಂದ ಮಲೆನಾಡಿನಲ್ಲಿ ಆಚರಿಸಲಾಯಿತು. ಶ್ರಾವಣ ಮಾಸದ ಎರಡನೇ ಶುಕ್ರವಾರ ಮನೆಮನೆ ದೇವಾಲಯಗಳಲ್ಲಿ ವರಮಹಾಲಕ್ಷ್ಮೀ ಮೂರ್ತಿಯನ್ನು ಸೀರೆ, ತಾಳಿ, ಬಂಗಾರದ ಆಭರಣ, ಹೂಗಳಿಂದ ಅಲಂಕರಿಸಿ ನೈವೇದ್ಯ ಮಾಡಿ ವಿಶೇಷವಾಗಿ ಪೂಜಿಸಲಾಯಿತು.
ಮಹಿಳೆಯರು ಅಕ್ಕಪಕ್ಕದ ಮನೆಯವರು, ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಆಮಂತ್ರಿಸಿ ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಟ್ಟು ಮುತ್ತೈದೆಯರಲ್ಲಿ ಲಕ್ಷ್ಮೀ ರೂಪ ಕಂಡರು. ವಿಶೇಷವಾಗಿ ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಲಕ್ಷ್ಮೀ ದೇವಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ದೇವಿ ಆಶೀರ್ವಾದ ಪಡೆಯಲು ಮಹಿಳೆಯರು ವ್ರತ ಹಾಗೂ ಉಪವಾಸದ ಮೊರೆ ಹೋಗಿದ್ದರು. ಸಂಪತ್ತು ಮತ್ತು ಅದೃಷ್ಟ ದೇವತೆಯಾಗಿರುವ ಲಕ್ಷ್ಮೀ ದೇವಿಯನ್ನು ವಿಧವಿಧವಾಗಿ ಆರಾಧಿಸಿದರು. ಸಂಪತ್ತು ದಯಪಾಲಿಸುವಂತೆ ಬೇಡಿಕೊಂಡರು.
ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ ಮಕ್ಕಳು, ಕುಟುಂಬಸ್ಥರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು ವರಮಹಾಲಕ್ಷ್ಮೀ ಪೂಜೆಗೆ ಮತ್ತಷ್ಟು ಮೆರುಗು ನೀಡಿತು. ಹಣ್ಣು-ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದರೂ ಸಂಪ್ರದಾಯದಂತೆ ವರಮಹಾಲಕ್ಷ್ಮೀಯನ್ನು ಆರಾಧಿಸಿದರು. ಮನೆಗಳಲ್ಲಿ ಮಾತ್ರವಲ್ಲದೇ ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರು. ಅಕ್ಕಪಕ್ಕದವರು, ಸಂಬಂಧಿಕರು, ಪರಿಚಯಸ್ಥರನ್ನು ಆಹ್ವಾನಿಸಿ ಊಟೋಪಚಾರ ನೆರವೇರಿಸಿದರು.