

ಶಿವಮೊಗ್ಗ: ಮುಂದಿನ ವರ್ಷ ಜನವರಿಯಿಂದ ದೇಶದ ವಿವಿಧ ಭಾಗಗಳಿಗೆ ಶಿವಮೊಗ್ಗದಿಂದ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ನೂತನ ರೈಲಿನ ವೇಳಾಪಟ್ಟಿಯೂ ಬಿಡುಗಡೆಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಬಿಜೆಪಿಯಿಂದ ಶಿವಮೊಗ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ವಿಭಾಗ ಮಟ್ಟದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ಕೋಟೆಗಂಗೂರಿನ ರೈಲ್ವೆ ಕೋಚಿಂಗ್ ಡಿಪೋ ಜನವರಿಗೆ ಮುನ್ನವೇ ಉದ್ಘಾಟನೆ ಆಗಲಿದೆ. ಬಳಿಕ ವಂದೇ ಭಾರತ್ ಸಂಚಾರ ಆರಂಭವಾಗಲಿದೆ ಎಂದರು.
ಶಿವಮೊಗ್ಗದಿಂದ ಬೆಂಗಳೂರು, ಕೇರಳದ ಎರ್ನಾಕುಲಂ, ಬಿಹಾರದ ಭಗಲ್ಪುರ್, ಚಂಡೀಗಢಕ್ಕೆ ವಂದೇ ಭಾರತ್ ರೈಲ್ವೆ ಸಂಪರ್ಕ ದೊರೆಯಲಿದೆ. ತಾಳಗುಪ್ಪ -ಶಿರಸಿ ರೈಲ್ವೆ ಮಾರ್ಗದ ಸರ್ವೇ ಮುಗಿದಿದೆ. ತಾಳಗುಪ್ಪ-ಹೊನ್ನಾವರ ರೈಲ್ವೆ ಯೋಜನೆಗೆ ಶೇ.73ರಷ್ಟು ಅರಣ್ಯ ಪ್ರದೇಶ ಇರುವುದರಿಂದ ಅಡೆತಡೆ ಉಂಟಾಗಿದೆ. ಶಿವಮೊಗ್ಗ-ಬೀರೂರು ಡಬ್ಲಿಂಗ್ ಕಾರ್ಯಕ್ಕೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ಮನೆಯಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ. ಜಲಜೀವನ ಮಿಷನ್ ಯೋಜನೆಗೆ ರಾಜ್ಯಕ್ಕೆ ಕೇಂದ್ರದಿಂದ 72 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಯೋಜನೆ ಕಾರ್ಯಗತಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಚನ್ನಬಸಪ್ಪ ಇತರರಿದ್ದರು.