

ನವದೆಹಲಿ: ಪ್ರತಿಕೂಲ ಪರಿಸ್ಥಿತಿಯಲ್ಲಿ ಅಪ್ರತಿಮ ಧೈರ್ಯ, ಸಾಹಸ ಪ್ರದರ್ಶಿಸುವ ಮಕ್ಕಳಿಗೆ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ‘ಶೌರ್ಯ ಪ್ರಶಸ್ತಿ’ ಈ ವರ್ಷ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಒಲಿದಿದೆ. ರಾಯಚೂರಿನ ದೇವದುರ್ಗ ತಾಲೂಕು ಹಿರೇರಾಯಕುಂಪಿ ಗ್ರಾಮದ 11 ವರ್ಷದ ವೆಂಕಟೇಶ ಮತ್ತು ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದ 9 ವರ್ಷದ ಆರತಿ ಕಿರಣ್ ಶೇಟ್ ಈ ವಿದ್ಯಾರ್ಥಿಗಳು. ದೇಶಾದ್ಯಂತ ಒಟ್ಟು 22 ಮಕ್ಕಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
12 ರಾಜ್ಯಗಳ ಮಕ್ಕಳಿಗೆ ಪ್ರಶಸ್ತಿ: ಹನ್ನೆರಡು ರಾಜ್ಯಗಳ ಒಟ್ಟು ಇಪ್ಪತ್ತೆರಡು ಮಕ್ಕಳಿಗೆ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ (ಐಸಿಸಿಡಬ್ಲ್ಯೂ) ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟಿಸಿದೆ.
ಇವರಲ್ಲಿ 10 ಬಾಲಕಿಯರು ಹಾಗೂ 12 ಬಾಲಕರು. ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಸ್ನೇಹಿತರನ್ನು ರಕ್ಷಿಸಿ ಸಾವಿಗೀಡಾದ ಕೇರಳದ ಯುವಕ ಮೊಹಮ್ಮದ್ ಮೌಸಿನ್ನನ್ನು ಅಭಿಮನ್ಯು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಐಸಿಸಿಡಬ್ಲ್ಯು ಮಾಹಿತಿ ನೀಡಿದೆ. ಮಿಜೋರಾಂನ ನಾಲ್ವರು, ಜಮ್ಮು-ಕಾಶ್ಮೀರ, ಕೇರಳ, ಕರ್ನಾಟಕ, ಒಡಿಶಾ, ಛತ್ತೀಸಗಢ, ಮಹಾರಾಷ್ಟ್ರದ ತಲಾ ಇಬ್ಬರು ಹಾಗೂ ಉತ್ತರಾಖಂಡ, ಅಸ್ಸಾಂ, ಮಣಿಪುರ, ಮೇಘಾಲಯದ ತಲಾ ಒಬ್ಬರು ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆರತಿಯ ಸಾಹಸ ಗುರುತಿಸಿ ಕರ್ನಾಟಕ ಸರ್ಕಾರ 2018ರಲ್ಲಿ ಮಕ್ಕಳ ದಿನಾಚರಣೆಯಂದು ‘ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ. ಈಗ ನವದೆಹಲಿಯಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಪೇರ್ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೊಷಣೆಯಾಗಿರುವುದು ಸಂತಸ ತಂದಿದೆ. | ಕಿರಣ್ ಪಿ. ಶೇಟ್ ಸಾಹಸಿ ಬಾಲಕಿ ಆರತಿಯ ತಂದೆ ಕೇಂದ್ರ ಸರ್ಕಾರ ಶೌರ್ಯ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆಂಬುಲೆನ್ಸ್ ಚಾಲಕ ಸೇತುವೆ ಮೇಲೆ ನೀರು ಹರಿಯುತ್ತಿದ್ದುದರಿಂದ ದಾರಿ ತಿಳಿಯದೆ ನಿಂತಿದ್ದ. ನೀರಿನಲ್ಲಿ ನಾನು ಮುಂದೆ ಹೋಗಿ ಆಂಬುಲೆನ್ಸ್ ಚಾಲಕನಿಗೆ ಹಿಂದೆ ಬರುವಂತೆ ಹೇಳಿ ಸೇತುವೆ ದಾಟಿಸಿದೆ. ಇದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಖುಷಿ ಉಂಟು ಮಾಡಿದೆ. | ವೆಂಕಟೇಶ ಹಿರೇರಾಯಕುಂಪಿ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಬಾಲಕ
ಹಲವರ ಪ್ರಾಣ ಕಾಪಾಡಿದ
2019ರ ಆಗಸ್ಟ್ 10ರಂದು ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹ ಬಂದಿತ್ತು. ಸೇತುವೆ ಮೇಲೂ ನೀರು ಹರಿಯುತ್ತಿದ್ದ ಪರಿಣಾಮ ಆಂಬುಲೆನ್ಸ್ ಚಾಲಕನಿಗೆ ಮುಂದಿನ ರಸ್ತೆ ಕಾಣುತ್ತಿರಲಿಲ್ಲ. ಈ ಸಂದರ್ಭದಲ್ಲಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಬಾಲಕ ವೆಂಕಟೇಶ್ ಸೇತುವೆ ಮೇಲಿದ್ದ ನೀರಿನಲ್ಲಿ ಈಜಾಡುತ್ತಾ ಚಾಲಕನಿಗೆ ದಾರಿ ತೋರಿಸಿದ್ದ. ವೆಂಕಟೇಶನ ಈ ಸಾಹಸದಿಂದಾಗಿ ಹಲವರ ಪ್ರಾಣ ಉಳಿದಿತ್ತು. ಈ ಸಾಹಸದ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು ಮತ್ತು ಜಿಲ್ಲಾಡಳಿತವೂ ಈತನ ಸಾಹಸವನ್ನು ಗುರುತಿಸಿ ಅಭಿನಂದಿಸಿತ್ತು. ‘ಪ್ರವಾಹದ ನೀರಿನಲ್ಲಿ ಈಜಿದ್ದಕ್ಕೆ ಮೊದಲು ಬೈದೆ. ನಂತರ ಆತ ಮೂರ್ನಾಲ್ಕು ಮಂದಿ ಪ್ರಾಣ ಕಾಪಾಡಿದ ಎಂದು ತಿಳಿದು ಖುಷಿಯಾಯಿತು’ ಎಂದು ಆತನ ತಂದೆ ದೇವೇಂದ್ರಪ್ಪ ಪ್ರತಿಕ್ರಿಯಿಸಿದರು.
ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ
ಜನವರಿ 24 ಅಥವಾ 25ರಂದು ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ಗೀತಾ ಸಿದ್ಧಾರ್ಥ ಹೇಳಿದ್ದಾರೆ. ದೆಹಲಿಯ ರಾಜ್ಪಥ್ನಲ್ಲಿ ನಡೆಯಲಿರುವ ಜ. 26ರ ಗಣರಾಜ್ಯೋತ್ಸವ ಪರೇಡ್ನಲ್ಲೂ ಈ ಮಕ್ಕಳು ಕಾಣಿಸಿಕೊಳ್ಳಲಿದ್ದಾರೆ.
ಹಸುವಿನ ಜತೆ ಕಾದಾಟ
9 ವರ್ಷದ ಆರತಿ 2018ರ ಜುಲೈ 13ರಂದು ತನ್ನ ಸೋದರ ಕಾರ್ತಿಕ್ನನ್ನು ಹಸುವಿನ ಆಕ್ರಮಣದಿಂದ ಪಾರು ಮಾಡಿದ್ದಳು. ಕೋಪೋದ್ರಿಕ್ತ ಹಸುವೊಂದು ಕೋಡುಗಳಿಂದ ಕಾರ್ತಿಕ್ನನ್ನು ತಿವಿಯಲು ಮುನ್ನುಗ್ಗುತ್ತಿದ್ದಾಗ ಆತನನ್ನು ಬಿಗಿದಪ್ಪಿಕೊಂಡ ಆರತಿ ಆಪಾಯದಿಂದ ಪಾರು ಮಾಡಿದ್ದಳು. ಅಷ್ಟಕ್ಕೆ ಸುಮ್ಮನಾಗದ ಹಸು ಬಾಲಕನ ಮೇಲೆ ಮತ್ತೆ ದಾಳಿ ಮಾಡಲು ಮುಂದಾದಾಗ ತಮ್ಮನನ್ನು ಕೈಯಲ್ಲಿ ಬಿಗಿದಪ್ಪಿ ಹಸುವಿಗೆ ಅಡ್ಡ ನಿಂತಳು. ಆರತಿಯ ನೋವಿನ ಚೀರಾಟ ಕೇಳಿ ಹೆತ್ತವರಾದ ಆಶಾ ಮತ್ತು ಕಿರಣ್ ಸ್ಥಳಕ್ಕೆ ಬಂದು ಹಸುವನ್ನು ಬಡಿದಟ್ಟಿದರು. ದಾಳಿಗೆ ತುತ್ತಾಗಿದ್ದ ಆರತಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ‘ಆರತಿ ನನಗೆ ಮಗನಿದ್ದಂತೆ. ಆಕೆಯ ಎದೆಗಾರಿಕೆ, ಧೈರ್ಯ ಕಂಡಾಗ ಹೆಮ್ಮೆಯಾಗಿತ್ತು. ನನ್ನ ಮಗನನ್ನು ರಕ್ಷಿಸಿದ ತಾಯಿ ಈಕೆ’ ಎಂದು ತಾಯಿ ಆಶಾ ಸಂತಸ ಹಂಚಿಕೊಂಡರು.