ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ

Govinda Karajola
Published on

ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಇಲಾಖಾ ಸಚಿವ ನಾಗೇಂದ್ರ ಅವರು ಕೂಡಲೇ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಮಂತ್ರಿಗಳ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಬರೆದಿದ್ದಾರೆ. ಆದರೂ ಎ್ಐಆರ್‌ನಲ್ಲಿ ಸಚಿವರ ಹೆಸರು ಬಂದಿಲ್ಲ ಎಂದರು.
ರಾಜ್ಯದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ಮಾಡಲು ಅಸಾಧ್ಯ. ಸಿಐಡಿ ಕೂಡ ಮುಖ್ಯಮಂತ್ರಿಗಳ ಅಧೀನದಲ್ಲಿರುವ ಕಾರಣ, ಸಚಿವರ ಬಗ್ಗೆ ತನಿಖೆ ಮಾಡಲು ಎಷ್ಟರಮಟ್ಟಿಗೆ ಸಾಧ್ಯ? ಸಚಿವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕಿತ್ತು ಎಂದರು.
ಬ್ಯಾಂಕ್ ಖಾತೆಯು ಎಂ.ಡಿ. ಮತ್ತು ಅಕೌಂಟ್ಸ್ ಅಧಿಕಾರಿಯ ಜಂಟಿ ಖಾತೆಯಾಗಿರುತ್ತದೆ. ಮಾರ್ಚ್‌ನಲ್ಲಿ ಹಣ ವರ್ಗಾವಣೆ ಆಗಿದೆ. ಮಾ.4ರಂದು 25 ಕೋಟಿ, 6ರಂದು 25 ಕೋಟಿ, 21ರಂದು 44 ಕೋಟಿ, ರಾಜ್ಯ ಹುಜೂರ್ ಖಜಾನೆಯಿಂದ 43.33 ಕೋಟಿ, ಮೇ 21ರಂದು 50 ಕೋಟಿ ವರ್ಗಾವಣೆ ಆಗಿದೆ ಎಂದು ವಿವರಿಸಿದರು.
ಜಂಟಿ ಖಾತೆ ಇದ್ದಾಗ ಹೇಗೆ ವರ್ಗಾವಣೆ ಆಗಿದೆ? ಬ್ಯಾಂಕಿನ ಪ್ರತಿ ತಿಂಗಳ ವಿವರ- ಹುಜೂರ್ ಖಜಾನೆಯ ವಿವರವನ್ನು ಪುನರ್ ಪರಿಶೀಲಿಸಲಿಲ್ಲವೇ? ಎಂದ ಅವರು, ಮಾರ್ಚ್ 31ರಂದು ಹಣಕಾಸು ವರ್ಷ ಮುಕ್ತಾಯ ಆದ ಬಳಿಕ ಎಂ.ಡಿ. ಮತ್ತು ಇಲಾಖೆಯ ಸರಕಾರದ ಮಟ್ಟದ ಅಧಿಕಾರಿಗಳು ಅದನ್ನು ಪರಿಶೀಲಿಸಬೇಕಿತ್ತು. ಹಣ ಖರ್ಚಾದ ಕುರಿತು ಪರಿಶೀಲನಾ ಸಭೆ ಮಾಡಿಲ್ಲವೇ? ಸಭೆ ಮಾಡಿಲ್ಲವೆಂದಾದರೆ ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಎಂದರ್ಥ.
ಈಗಲೂ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇದನ್ನು ಮುಚ್ಚಿಟ್ಟಿದೆ ಎಂದರು.
ಮೃತರ ಬಳಿ ಇದ್ದ ಪೆನ್ ಡ್ರೈವ್ ಮತ್ತು ಲ್ಯಾಪ್‌ಟಾಪಿನಲ್ಲಿದ್ದ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು. ಸತ್ಯವಂತರೆಂದು ಹೇಳಿಕೊಳ್ಳುವ ಇವರು ತನಿಖೆಗೆ ಮುಂದಾಗಬೇಕು ಎಂದರು. ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ 24 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಇಲಾಖೆಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದ ಅವರು,
ಈ ವಿಷಯದಲ್ಲಿ ತೀವ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ನಿಗಮದಲ್ಲಿ ಹಗಲುದರೋಡೆ:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ ಹಗರಣ, ಇತ್ತೀಚಿನ ವರ್ಷಗಳಲ್ಲಿ ಖಜಾನೆಯನ್ನೇ ಲೂಟಿ ಮಾಡಿದ ದೊಡ್ಡ ಹಗರಣವಿದು. ಈ ವಿಚಾರ ಗೊತ್ತಿದ್ದೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತ ಸರ್ಕಾರವಿದು ಎಂದು ಟೀಕಿಸಿದರು.
ಹಿಂದೆ ಕೆ.ಎಸ್.ಈಶ್ವರಪ್ಪನವರನ್ನು ಬಲಿ ಪಡೆದಿದ್ದೀರಿ. ಅವತ್ತು ನೀವು ಪ್ರತಿಪಕ್ಷದಲ್ಲಿ ಇದ್ದಾಗ ಯಾವ ರೀತಿ ಮಾತಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಗೋವಿಂದ ಕಾರಜೋಳ ಕುಟುಕಿದರು.
ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net