

ರಾಣೆಬೆನ್ನೂರ: ನಾಯಕ ತಳವಾರ ಮತ್ತು ಪರಿವಾರ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಹಿಂದುಳಿದ ವರ್ಗದ ಜಾತಿಗಳಿಗೆ ತಳವಾರ ಹೆಸರಿನಲ್ಲಿ ನಕಲಿ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಅನ್ಯ ಜಾತಿಗಳನ್ನು ಎಸ್ಟಿಗೆ ಸೇರ್ಪಡೆ ಮಾಡದಂತೆ ಆಗ್ರಹಿಸಿ ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಒಕ್ಕೂಟದ ವತಿಯಿಂದ ಗುರುವಾರ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿಯನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು ಮತ್ತು ಪರಿಶಿಷ್ಟ ಪಂಗಡದ ನಿಜವಾದ ನಾಯಕ ತಳವಾರರಿಗೆ ಅನ್ಯಾಯವಾಗುತ್ತಿರುವುದನ್ನು ತಡೆಗಟ್ಟಬೇಕು. ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಅಕ್ರಮವಾಗಿ ಬೇರೆ ಸಮುದಾಯದವರು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ವಿವಿಧ ಸೌಲಭ್ಯ ತೆಗೆದುಕೊಂಡು ವಂಚಿಸುತ್ತಿದ್ದಾರೆ. ಇದರಿಂದ ನೈಜ ತಳವಾರ ಜಾತಿಯವರಿಗೆ ಶಿಕ್ಷಣ, ನೇಮಕಾತಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹೆಚ್ಚುವರಿ 1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಮಹಷಿರ್ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ, ಪರಿಶಿಷ್ಟ ಪಂಗಡದ ಜನಾಂಗದ ಆಥಿರ್ಕ, ಶೈಕ್ಷಣಿಕ, ರಾಜಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಕೆಲ ತಾಲೂಕಿನಲ್ಲಿ ವಾಲ್ಮೀಕಿ ಭವನಗಳ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿವೆ. ಸಿಎಂ ಸಿದ್ದರಾಮಯ್ಯ ಕೂಡಲೇ ಅವುಗಳನ್ನು ರ್ಪೂಣಗೊಳಿಸಬೇಕು. ಜತೆಗೆ ವಿದ್ಯಾಥಿರ್ ವೇತನ ಮತ್ತು ಸಹಾಯಧನ ನಿರಂತರವಾಗಿ ನೀಡಬೇಕು. ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದು ಭದ್ರತೆ ಒದಗಿಸಬೇಕು. ಬೇರೆ ಪ್ರಬಲ ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮಾಜದ ಪ್ರಮುಖರಾದ ರವಿಂದ್ರಗೌಡ ಪಾಟೀಲ, ಕರಬಸಪ್ಪ ಕೂಲೇರ, ಹನುಮಂತ ಮೀನಕಟ್ಟಿ, ರಾಜೇಂದ್ರ ಬಸೇನಾಯಕ, ಶಶಿಧರ ಬಸೇನಾಯಕ, ರಾಜು ಮಾದಮ್ಮನವರ, ಭೀಮಣ್ಣ ಎಡಚಿ, ಮೌನೇಶ ತಳವಾರ, ರಾಯಣ್ಣ ಮಾಗನೂರು, ಬಸವರಾಜ ತಳವಾರ, ಸಂಜೀವ ಶಿಡಗನಾಳ, ನಾಗೇಶ ತಳವಾರ, ರವಿ ತಳವಾರ, ಶ್ರೀನಿವಾಸ ಹುಬ್ಬಳ್ಳಿ, ಮಂಜುನಾಥ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.