

ಬೆಂಗಳೂರು: ಪರಿಶಿಷ್ಟ ಜಾತಿ, ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲು ನಾವು ಕಾಯ್ದೆ ತಂದಿದ್ದೇವೆ. ಕೇಂದ್ರ ಅಥವಾ ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಕಾಯ್ದೆ ಮಾಡಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶ್ರೀ ವಾಲ್ಮೀಕಿ ಜಯಂತಿ ಪ್ರಯುಕ್ತ ಕಾರ್ಯಕ್ರಮ ಉದ್ಘಾಟಿಸಿ, ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಬರೀ ಬಾಯಿ ಮಾತಲ್ಲಿ ಸಮಾನತೆ ಬರಲ್ಲ. ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಬಿಜೆಪಿಗೆ ಚಾಟಿ ಬೀಸಿದರು.
ಎಲ್ಲ ಎಸ್‌ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿ.ವಿ.ಗೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಘೋಷಣೆ ಮಾಡಿದರು.
ಶಾಕುಂತಲಾ ಕಾದಂಬರಿ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯದವರು. ದರೋಡೆ ಮಾಡ್ಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಕಟ್ಟಿಬಿಟ್ಟರು. ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥ ಹೊತ್ತಲ್ಲೇ ಸಂಸ್ಕೃತ ಕಲಿತು ಶ್ಲೋಕಗಳ ಮೂಲಕ ಜಗತ್ಪ್ರಸಿದ್ದ ರಾಮಾಯಣ ಮಹಾಕಾವ್ಯ ಬರೆದದ್ದು ಹೆಮ್ಮೆಯ ಸಂಗತಿ ಎಂದರು.
ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತಿ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡುತ್ತೇನೆ ಎಂದು ಪುನರುಚ್ಚರಿಸಿದರು.
ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಸರಿಯಾದ ಉತ್ತರ ಕೊಡಿ. ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ್ಮ ಸರ್ಕಾರ. ಇದನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು ಎಂದರು.
ರಾಜನಹಳ್ಳಿ ವಾಲ್ಮೀಕಿ ಸಮುದಾಯದ ಮಠದ ಜಗದ್ಗುರು ಪ್ರಸನ್ನಾನಂದಪುರಿ ಶ್ರೀಗಳು ಸಾನ್ನಿದ್ಯ ವಹಿಸಿದ್ದರು. ಸಚಿವರಾದ ಎಚ್.ಕೆ.ಪಾಟೀಲ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ವಿಧಾನಸಭೆಯ ಉಪಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ, ಶಾಸಕರಾದ ರಾಜ ವೇಣುಗೋಪಾಲ ನಾಯಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರತು ಉಪಸ್ಥಿತರಿದ್ದರು.
2024 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಕಿಲಾರಿ ಜೋಗಯ್ಯ, ಡಾ. ಎಸ್.ರತ್ನಮ್ಮ, ರಾಜಶೇಖರ ತಳವಾರ, ಕೆ.ಎಸ್. ಮೃತ್ಯುಂಜಯ, ರತ್ನಮ್ಮ ಬಿ. ಸೋಗಿ ಅವರುಗಳಿಗೆ ಮುಖ್ಯಮಂತ್ರಿಗಳು ತಲಾ 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂ.ನಗದನ್ನು ನೀಡಿ ಸನ್ಮಾನಿಸಿದರು.
ವಾಲ್ಮೀಕಿ ಸಮುದಾಯವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಮಾಜದ ಮುಖ್ಯವಾಹಿನಿಗೆ ತರಲು ವಿಶೇಷ ಕೊಡುಗೆ ನೀಡಿದೆ. ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ಸಮುದಾಯದವರು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುಂದುವರೆಯಬೇಕು.
-ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ.
ಹಿಂದುಳಿದವರು ವಿದ್ಯಾವಂತರಾಗಿ, ಸಂಘಟಿತರಾಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದರ ಮೂಲಕ ಸಮಾಜದ ಆಸ್ತಿ ಮಾಡಬೇಕು. ರಾಜಕೀಯವಾಗಿ ಅಧಿಕಾರಕ್ಕೆ ಬರಬೇಕು. ವಸತಿ ಶಾಲೆಗಳನ್ನು ಹೆಚ್ಚಿಸಲಾಗಿದ್ದು, ವಸತಿ ಶಾಲೆಯಲ್ಲಿ ಪ್ರವೇಶ ಸಂಖ್ಯೆಗಳು ಹೆಚ್ಚಾಗಿವೆ.
-ಕೆ.ಎನ್.ರಾಜಣ್ಣ, ಸಹಕಾರ ಸಚಿವ.
ಪ್ರತಿ ಹೋಬಳಿಗೂ ವಸತಿ ಶಾಲೆ ನೀಡುವುದರ ಮೂಲಕ ಶೋಷಿತ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ನಾಲ್ಕು ವಾಲ್ಮೀಕಿ ಆಶ್ರಮ ಶಾಲೆಗಳನ್ನು ತೆರೆಯಲಾಗಿದ್ದು, ನಿಗಮದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.
-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ.
ರಾಜ್ಯದಲ್ಲಿನ ಹಿಂದುಳಿದ ವರ್ಗದವರ ಬಗ್ಗೆ ಕಳಕಳಿಯನ್ನು ಹೊಂದಿರುವ ಮುಖ್ಯಮಂತ್ರಿಯವರು ಇಡೀ ರಾಷ್ಟ್ರದಲ್ಲೇ ಶೇ 24.1 ರಷ್ಟು ಅನುದಾನವನ್ನು ಈ ವರ್ಗದವರಿಗೆ ಮೀಸಲಿಟ್ಟಿದ್ದಾರೆ. ನಿಗಮಗಳಿಗೆ ಇನ್ನೂ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ನಿಗದಿಪಡಿಸಬೇಕು.
-ಬಸನಗೌಡ ದದ್ದಲ್, ಅಧ್ಯಕ್ಷರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ.
ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿದರು.