ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರನ್ನು ತಪ್ಪಿತಸ್ಥರಾಗಲು ಸಾಧ್ಯವೇ?: ಡಿಸಿಎಂ ಡಿಕೆಶಿ ಪ್ರಶ್ನೆ

dk
Published on

ಬೆಂಗಳೂರು:
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ರಾಷ್ಟ್ರೀಯ ಬ್ಯಾಂಕುಗಳು ಭಾಗಿಯಾಗಿದ್ದರೆ, ಅದಕ್ಕೆ ದೆಹಲಿಯ ಕೇಂದ್ರ ಸಚಿವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವೇ? ಅಧಿಕಾರಿಗಳು ಮಾಡುವ ಅಕ್ರಮಕ್ಕೆ ಸಚಿವರನ್ನು ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಮೇಲ್ಮನೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಸ್ತಾಪಿತ ವಿಷಯಕ್ಕೆ ತಿರುಗೇಟು ನೀಡಿದರು.
ವಾಲ್ಮೀಕಿ ನಿಗಮದ ಹಗರಣ ಪೂರ್ವನಿಯೋಜಿತವಾಗಿದ್ದು, ಮೊದಲೇ ಇ ಸ್ಟಾಂಪ್ ಪೇಪರ್ ಖರೀದಿ ಮಾಡಿ, ಒಂದೇ ದಿನದಲ್ಲಿ ಸಾಲಕ್ಕೆ ಅರ್ಜಿ ಹಾಕಿ, ಸೆಕ್ಯುರಿಟಿ ಓವರ್ ಡ್ರ್‌ಟಾ ತೆಗೆದುಕೊಂಡು ಹಣ ಪಡೆಯಲಾಗಿದೆ ಎಂದು ಆರೋಪಿಸಿದ್ದ ಸಿ.ಟಿ.ರವಿಗೆ ಉತ್ತರಿಸಿದರು.
ಸಿ.ಟಿ ರವಿ ಅವರು ಅಕ್ರಮದ ಬಗ್ಗೆ ಮಾತನಾಡುತ್ತಾ ಅಕ್ರಮ ಮಾಡಿದವರ ಒಂದು ಕೂಟ ಇದೆ ಎಂದೆಲ್ಲಾ ಪ್ರಸ್ತಾಪ ಮಾಡಿದ್ದಾರೆ. ಬ್ಯಾಂಕಿನಲ್ಲಿ ಆಗಿರುವ ಅಕ್ರಮದ ವಿಚಾರ ಪ್ರಸ್ತಾಪಿಸಿದ್ದಾರೆ. ಅಕ್ರಮವಾಗಿ ಬ್ಯಾಂಕಿಗೆ ವರ್ಗಾವಣೆಯಾದ ಹಣದ ಮೇಲೆ ಒಂದೇ ದಿನದಲ್ಲಿ ಸಾಲಕ್ಕೆ ಅರ್ಜಿ ಹಾಕಿದರು, ಓವರ್ ಡ್ರ್‌ಟಾ ತೆಗೆದುಕೊಂಡು ಹಣ ಬಿಡಿಸಿಕೊಂಡರು ಎಂದೆಲ್ಲ ವಿವರಿಸಿದ್ದಾರೆ. ಬ್ಯಾಂಕಿನಲ್ಲಿ ಒಂದೇ ದಿನದಲ್ಲಿ ಇಷ್ಟೆಲ್ಲಾ ಆಗಿದೆ ಎಂದರೆ ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಹ ಭಾಗಿಯಾಗಿದೆ ಎಂದು ಅರ್ಥವಲ್ಲವೇ? ಕೇಂದ್ರ ಸಚಿವರು ಭಾಗಿಯಾಗಿದ್ದಾರೆ ಎಂದು ಹೇಳಲು ಆಗುತ್ತದೆಯೇ? ಎಂದು ಕೇಳಿದರು.
ಯಾರೋ ಅಧಿಕಾರಿ ಮಾಡಿದ ತಪ್ಪಿಗೆ ಸಚಿವರ ಮೇಲೆ ಆರೋಪ ಹೊರಿಸಲು ಆಗುವುದಿಲ್ಲ. ಮಂತ್ರಿಗಳು, ಶಾಸಕರು ಅಕ್ರಮಗಳಲ್ಲಿ ಭಾಗಿಯಾಗಿದ್ದರೆ ಯಾವುದೇ ಕಾರಣಕ್ಕೂ ನಾವು ಅದಕ್ಕೆ ಬೆಂಬಲವಾಗಿ ನಿಲ್ಲುವುದಿಲ್ಲ. ಈ ಪ್ರಕರಣದಲ್ಲಿ ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ನಡೆದುಕೊಂಡು, ತನಿಖಾ ತಂಡ ರಚನೆ ಮಾಡಿದೆ. ತನಿಖಾ ತಂಡವು ಹಣವನ್ನು ಮರಳಿ ಪಡೆದಿದೆ ಎಂದರು.
ಮಾಜಿ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ನೋಟಿಸ್ ನೀಡಿದೆ. ಎಸ್‌ಐಟಿ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ಸಿಬಿಐ ಸೇರಿದಂತೆ ಯಾರು ಬೇಕಾದರೂ ಬಂದು ತನಿಖೆ ಮಾಡಲಿ. ಆದರೆ ನೀವು ಅದಕ್ಕಿಂತ ಮುಂಚಿತವಾಗಿ ಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಸಿದರೆ ಹೇಗೆ? ನೀವು ಯಾವ ದೃಷ್ಟಿಕೋನದಲ್ಲಿ ಸರಕಾರ ಆರೋಪಿಗಳ ರಕ್ಷಣೆ ಮಾಡುತ್ತಾ ಇದೆ ಎಂದು ಹೇಳಲು ಹೊರಟಿದ್ದೀರಿ ಎಂದು ನನಗೆ ತಿಳಿದಿದೆ. ನೀವು ಅವರ ಹೆಸರು ಹೇಳಿ. ನಾನು ಸಹ ನನಗೆ ಗೊತ್ತಿರುವ ಹೆಸರುಗಳನ್ನು ಹೇಳುತ್ತೇನೆ ಎಂದು ಸಿ.ಟಿ.ರವಿ ಅವರಿಗೆ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net