ವಾಲ್ಮೀಕಿ ನಿಗಮದ ಭ್ರಷ್ಟಾಚಾರ: ಡಿಸಿ ಕಚೇರಿಗಳಿಗೆ 28ರಂದು ಬಿಜೆಪಿ ಮುತ್ತಿಗೆ

New Vijayendra New 11
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಸೂತ್ರದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜೂ.28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.

ರಾಜ್ಯ ಸರಕಾರವು ಕೆಲವು ಅಧಿಕಾರಿಗಳನ್ನು ಬಂಧಿಸಿ 10 ಕೋಟಿ ಸಿಕ್ಕಿದೆ, 3 ಕೋಟಿ ಸಿಕ್ಕಿದೆ ಎಂದು ತೇಪೆ ಹಚ್ಚಿ ಪ್ರಕರಣ ಸಂಪೂರ್ಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಅನ್ಯಾಯ ಸರಿಪಡಿಸಲೇಬೇಕು

ಸಚಿವರು ರಾಜೀನಾಮೆ ಕೊಟ್ಟಿದ್ದಾರೆ, 25 ಕೋಟಿ ರೂ. ವಾಪಸ್ ಬಂದಿದೆ ಎಂಬುದು ಪ್ರಶ್ನೆ ಅಲ್ಲ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ದೋಚಲಾಗಿದೆ. ಬಿಜೆಪಿ ಈ ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎಂದು

ಹೋರಾಟ ನಿಲ್ಲುವುದಿಲ್ಲ

ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಭ್ರಷ್ಟ ಕಾಂಗ್ರೆಸ್ಸಿನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಎಲ್ಲ ಹಣ ವಾಪಸ್ ಬರುವ ತನಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ ಎಂದರು.

ಹಣಕಾಸು ಇಲಾಖೆಗೆ ಗೊತ್ತಾಗದೇ, ಮಾಹಿತಿ ಇಲ್ಲದೇ ಇಷ್ಟು ದೊಡ್ಡ ಹಗರಣ ಆಗಲು ಸಾಧ್ಯವೇ ಇಲ್ಲ. ಸರ್ಕಾರ ಏನೇ ಪ್ರಯತ್ನ ಮಾಡಿದರೂ ಶಾಮೀಲಾದ ಎಲ್ಲರ ವಿರುದ್ಧ ಕ್ರಮವಾಗುವ ತನಕ ಬಿಜೆಪಿ ವಿರಮಿಸುವುದಿಲ್ಲ ಎಂದು ಹೇಳಿದರು.

ಪಕ್ಷದ ಎಸ್‌ಟಿ ಸಮುದಾಯದ ಮುಖಂಡರು ಶನಿವಾರ ಭೇಟಿಯಾಗಿದ್ದರು. ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸುವ ಅಗತ್ಯವಿದೆ ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 18ರಂದು ಸಭೆ ನಡೆಸಿ, 28ರಂದು ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ಹೋರಾಟಕ್ಕೆ ಇಳಿದು ಭಂಡ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಗುಡುಗಿದರು.

ಪ್ರಕೋಷ್ಠ ಗಟ್ಟಿಗೊಳಿಸುವೆವು

ಪಕ್ಷದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರಕಾರದ ಕಿರುಕುಳ, ದೌರ್ಜನ್ಯ ಹೆಚ್ಚಿದೆ. ಇದನ್ನು ಧೈರ್ಯದಿಂದ ಎದುರಿಸಲಿದ್ದೇವೆ. ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಮಂಡಲ ಮಟ್ಟದಲ್ಲಿ ನಮ್ಮ ಕಾನೂನು ಪ್ರಕೋಷ್ಠವನ್ನು ಗಟ್ಟಿಗೊಳಿಸಲಿದ್ದೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಆಗಿರುವ ಹಿನ್ನಡೆಯ ಪರಿಣಾಮವಾಗಿ ಹತಾಶೆ ಸ್ಥಿತಿಯಲ್ಲಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಯುತ್ತಿದೆ. ವಿನಾಕಾರಣ ಎಫ್‌ಐಆರ್, ಪೊಲೀಸರಿಂದ ಕಿರುಕುಳ ದಿನೇದಿನೇ ಜಾಸ್ತಿ ಆಗುತ್ತಿದೆ.

ಕಾರ್ಯಕರ್ತರಿಗೆ ಧೈರ್ಯ ತುಂಬುವುದು, ಕಾನೂನು ಪ್ರಕೋಷ್ಠವನ್ನು ಸದೃಢಗೊಳಿಸಲು ವಕೀಲ ಮಿತ್ರರ ಸಭೆ ನಡೆಸಿದ್ದು, ಯಾರೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲವೆಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net