

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹು ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ದ ದಾಳಿ, ಶೋಧ ಕಾರ್ಯವನ್ನು ಸ್ವಾಗತಿಸುತ್ತೇವೆ ಎಂದು ಮಾಜಿ ಸಚಿವ, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ದಲಿತರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕಾದ 93 ಕೋಟಿ ರೂ. ಹಣ ಲೂಟಿಯಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರ ವಿಚಾರಣೆ ನಡೆಯಬೇಕು ಎಂದು ಹೇಳಿದರು.
ನಿಗಮದ ಹಣ ನೇರವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಲಪಟಾಯಿಸಿರುವ ಕಾರಣ ಮನಿ ಲಾಂಡ್ರಿಂಗ್ ಕಾಯ್ದೆಯಡಿಡಿ ಬರಲಿದೆ. ಸಿಬಿಐ ತನಿಖೆ ಬೆನ್ನಲ್ಲೇ ಇ.ಡಿ. ಪ್ರವೇಶವಾಗಿದೆ. ಹಣ ಅಕ್ರಮ ವರ್ಗಾವಣೆಯನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿದೆ.
ಅಕ್ರಮವಾಗಿ ವರ್ಗಾವಣೆಯಾದ ಕೋಟ್ಯಂತರ ರೂ.ಗಳು ವಾಪಸ್ಸಾದ ನಿದರ್ಶನಗಳಿಲ್ಲ. ಆದರೂ ಹಣ ವಾಪಸ್ ಪಡೆಯುತ್ತೇವೆ ಎಂದು ಸರ್ಕಾರ ಹೇಳಿತ್ತು. ಬಹುದೊಡ್ಡ ಮೊತ್ತ ಇನ್ನೂ ಮರಳಿಲ್ಲ, ಇದೊಂದು ಮನಿ ಲಾಂಡ್ರಿಂಗ್ ಸರ್ಕಾರವೆಂದು ಅಶ್ವತ್ಥ ನಾರಾಯಣ ಟೀಕಿಸಿದರು.
ದಲಿತರ ಹಣವನ್ನು ಯಾರೆಲ್ಲ ನುಂಗಿದ್ದಾರೆಯೋ ಅವರಿಗೆಲ್ಲ ತಕ್ಕ ಶಾಸ್ತಿಯಾಗುವ ವಿಶ್ವಾಸವಿದೆ. ಈ ಪ್ರಕರಣದಲ್ಲಿ ಬಿಜೆಪಿಯವರು ಶಾಮೀಲಾಗಿದ್ದರೆ, ಅವರ ವಿರುದ್ಧವೂ ಕಾನೂನು ರೀತ್ಯ ಕ್ರಮಕ್ಕೆ ಯಾವುದೇ ಅಭ್ಯಂತರವಿಲ್ಲ.
ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿರುವುದನ್ನು ಮುಚ್ಚಿಕೊಳ್ಳಲು ಏನೆಲ್ಲ ಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ. ಸಿಬಿಐ, ಇ.ಡಿ. ತನಿಖಾ ಅಖಾಡಕ್ಕೆ ಧುಮುಕಿದ್ದು, ತನಿಖೆ ಗಂಭೀರ ತಿರುವು ಪಡೆಯುವುದು ನಿಶ್ಚಿತವೆಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.