

ವಜ್ರಾಸನವನ್ನು ಸಾಮಾನ್ಯವಾಗಿ ಗುಡುಗು ಭಂಗಿ ಎಂದು ಕರೆಯಲಾಗುತ್ತದೆ. ಇದು ಹಿಂದೂ ಮತ್ತು ಬೌದ್ಧ ಸಂಪ್ರದಾಯಗಳಲ್ಲಿ ಪೌರಾಣಿಕ ಹಿನ್ನೆಲೆ ಹೊಂದಿದೆ. ಪುರಾಣಗಳ ಪ್ರಕಾರ, ಸಿಡಿಲು ಇಂದ್ರ ದೇವರು ಬಳಸಿದ ಆಯುಧವಾಗಿದ್ದು, ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಸಾಕಾರಗೊಳಿಸುತ್ತದೆ. ಬೌದ್ಧ ಸಿದ್ಧಾಂತದಲ್ಲಿ ಈ ಭಂಗಿಯು ವಜ್ರದ ದೃಢತೆ ಮತ್ತು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.
ಇದು ಜ್ಞಾನೋದಯದ ಅಚಲ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ವಜ್ರಾಸನವನ್ನು ಅಭ್ಯಾಸ ಮಾಡುವುದು ಸಾಧಕನ ಸಾಧನೆಗೆ ಮತ್ತಷ್ಟು ಪೂರಕವಾಗಿರುತ್ತದೆ. ಗುಡುಗಿನ ಪೌರಾಣಿಕ ಗುಣಗಳಿಗೆ ಹೋಲುವ ಮಾನಸಿಕ ಸ್ಪಷ್ಟತೆ ಮತ್ತು ದೃಢತೆಯನ್ನು ಬೆಳೆಸುತ್ತದೆ ಎಂದು ನಂಬಲಾಗಿದೆ.
ಧ್ಯಾನ ವಿಧಾನ: ವಜ್ರಾಸನವು ಒಂದು ರೀತಿಯ ಧ್ಯಾನ ವಿಧಾನ. ವಜ್ರಾಸನ, ಗುಲ್ಪ ವಜ್ರಾಸನ, ಸುಪ್ತ ವಜ್ರಾಸನ ಮತ್ತು ಸುಪ್ತ ಪೂರ್ಣ ವಜ್ರಾಸನಗಳೆಂಬ ವಿಧಗಳಿವೆ. ವಜ್ರಾಸನವನ್ನು ವಜ್ರದ ಭಂಗಿ ಎಂದೂ ಕರೆಯುತ್ತಾರೆ. ಇದು ಸರಳವಾದ ಆದರೆ ಹೆಚ್ಚು ಪ್ರಯೋಜನಕಾರಿಯಾದ ಯೋಗದ ಆಸನವಾಗಿದ್ದು, ಇದು ವ್ಯಾಪಕ ಶ್ರೇಣಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಮೂಲಭೂತ ಮಂಡಿಯೂರಿ ಕುಳಿತುಕೊಳ್ಳುವ ಭಂಗಿಯು ಎಲ್ಲಾ ಹಂತದ ಅಭ್ಯಾಸಿಗಳಿಗೆ ಪ್ರಯೋಜನಕಾರಿ ಭಂಗಿಯಾಗಿದೆ.
ವಿಧಾನ: ಮೊದಲು ನೆಲದ ಮೇಲೆ ಹಾಸಿದ ಜಮಖಾನದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ಆನಂತರ ಎರಡೂ ಕಾಲುಗಳನ್ನು ಮಂಡಿ ಬಾಗಿಸಿ ಕುಳಿತುಕೊಳ್ಳಬೇಕು. ಹಾಗೆ ಕುಳಿತಾಗ ಮಂಡಿಗಳು ಪರಸ್ಪರ ತಾಗಿಕೊಂಡಿರಬೇಕು, ಎರಡೂ ಹಿಮ್ಮಡಿಗಳೂತಾಗಿಕೊಂಡಿರಲಿ. ಇಡೀ ಶರೀರದ ಭಾರ ಎರಡು ಹಿಮ್ಮಡಿಗಳ ಮೇಲಿರಲಿ. ಆನಂತರ ಎದೆಯನ್ನು ನೇರಮಾಡಿ ಕುಳಿತುಕೊಳ್ಳಿ. ಈ ಸ್ಥಿತಿಯಲ್ಲಿ ಹೆಚ್ಚು ಹೊತ್ತು ಕುಳಿತಷ್ಟೂ ದೇಹ ವಜ್ರದ ಹಾಗೆ ಗಟ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಆಸನದಲ್ಲಿ ಸಮ ಉಸಿರಾಟ ನಡೆಸುತ್ತಾ 1 ನಿಮಿಷದಿಂದ 3 ನಿಮಿಷದವರೆಗೆ ಇರಿ. ಅನಂತರ ತುಸು ವಿಶ್ರಾಂತಿ.
ಪ್ರಯೋಜನ: ಈ ಆಸನದಿಂದ ಮೊಣಕಾಲು ನೋವು, ಪಾದಗಳ ಗಂಟಿನ ನೋವು, ಕಾಲುಗಳ ಸಿಡಿತ ಇತ್ಯಾದಿ ನಿವಾರಣೆಯಾಗುತ್ತವೆ. ಪ್ರಾಣಾಯಾಮ ಮತ್ತು ಧ್ಯಾನಗಳಿಗೆ ಈ ಆಸನವು ಬಹಳ ಉಪಯುಕ್ತವಾಗಿದೆ. ಬೆನ್ನು, ಕೈ, ಕಾಲುಗಳಿಗೆ ಲಘುತ್ವ ಉಂಟಾಗುವುದು. ಉಸಿರಾಟ ನಿರಾಯಾಸವಾಗುವುದು. ದೀರ್ಘಕಾಲದ ಅಜೀರ್ಣ, ಮಲಬದ್ಧತೆ ಮತ್ತು ಉಬ್ಬರಿಸುವುದು ಇವೆಲ್ಲಾ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸ್ಥಿತಿಯಾಗಿದೆ.
ಜೀರ್ಣಕಾರಿ ಸಮಸ್ಯೆಗಳನ್ನು ದೂರವಿಡಲು ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯು ಸರಿದೂಗಲು ಊಟದ ನಂತರ ಈ ಯೋಗದ ಭಂಗಿಯನ್ನು ಅಭ್ಯಾಸ ಮಾಡಿದರೆ ಪರಿಣಾಮಕಾರಿಯಾಗಿ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಹರ್ನಿಯಾ ಆಗದಂತೆ ತಡೆಯುತ್ತದೆ. ಮೂಲವ್ಯಾಧಿ ನಿಯಂತ್ರಣಕ್ಕೆ ಸಹಕಾರಿ. ಪುರುಷರ ಹೈಡ್ರೋಸಿಲ್ ಸಮಸ್ಯೆಯು ನಿಯಮಿತವಾಗಿ ವಜ್ರಾಸನ ಮಾಡುವುದರಿಂದ ನಿಯಂತ್ರಣಕ್ಕೆ ಬರುತ್ತದೆ. ಈ ಆಸನದಲ್ಲಿ ಮುದ್ರೆಗಳನ್ನು ಧಾರಣೆ ಮಾಡಲು ಸುಲಭವಾಗುತ್ತದೆ.
ವಿ.ಸೂ: ಆರಂಭದಲ್ಲಿ ವಜ್ರಾಸನ ಅಭ್ಯಾಸ ನಡೆಸಲು ತುಸು ಕಷ್ಟವಾಗಬಹುದು. ಕಾಲಿನ ಹಾಗೂ ಪಾದದ ಕೆಳಗಡೆ ತಲೆದಿಂಬು ಇಡಬಹುದು. ತೀವ್ರ ಮೊಣಕಾಲು ನೋವು ಇದ್ದವರು, ಪಾದದ ಗಾಯ ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.
(ಪ್ರತಿಕ್ರಿಯಿಸಿ : vvsudina@gmail.com)