ಬಸವಕಲ್ಯಾಣದಲ್ಲಿ ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

siddaramaiah basava
Published on

ಬೆಂಗಳೂರು: ಬಸವ ಕಲ್ಯಾಣದಲ್ಲಿ ‘ವಚನ ವಿಶ್ವವಿದ್ಯಾಲಯ’ ಸ್ಥಾಪಿಸುವ ಬೇಡಿಕೆಯನ್ನು ಈಡೇರಿಸಲು ಮುಂದಿನ ವರ್ಷ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವಿಶ್ವಗುರು ಬಸವಣ್ಣ ಅವರನ್ನು ‘ಕರ್ನಾಟಕ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ’ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ವಚನ ವಿಶ್ವವಿದ್ಯಾಲಯ ಆರಂಭಿಸಬೇಕು ಎನ್ನುವುದು ಬಹಳ ದಿನಗಳ ಬೇಡಿಕೆಯಾಗಿದೆ. ಅದನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾನು ಭರವಸೆ ನೀಡಿರುವ ಎಲ್ಲವೂಗಳನ್ನು ಇಲ್ಲಿಯವರೆಗೆ ನೆರವೇರಿಸಿದ್ದು, ನುಡಿದಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದರು.

ಮೆಟ್ರೋಗೆ ಬಸವ ಹೆಸರು ಕೇಂದ್ರಕ್ಕೆ ಶಿಾರಸು:

ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ಬಸವ ಮೆಟ್ರೋ ಎಂದು ಘೋಷಿಸುತ್ತಿದ್ದೆ. ಕೇಂದ್ರ ಸರ್ಕಾರದ ಜತೆಯೂ ಚರ್ಚಿಸಬೇಕಿರುವ ಕಾರಣ, ಶಿಾರಸು ಮಾಡುತ್ತೇನೆ ಎಂದು ಹೇಳಿದರು.

ಜಾತಿ ವ್ಯವಸ್ಥೆ ವಿರೋಧಿಸಿ ಹೊಸ ಧರ್ಮ

ಚಲನೆ ಇಲ್ಲದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು. ನಾವೆಲ್ಲರೂ ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು. ಈ ಅಸಮಾನತೆ ಹೋಗದಿದ್ದರೆ, ಅಸಮಾನತೆಗೆ ಒಳಗಾಗಿರುವ ಸಮುದಾಯಗಳು ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳನ್ನು ನಾವು ನೆನಪಿಡಬೇಕು ಎಂದರು.

ವಿದ್ಯಾರ್ಥಿದೆಸೆಯಿಂದಲೇ ಬಸವಣ್ಣರ ಅಭಿಮಾನಿ

ನಾನು ವಿದ್ಯಾರ್ಥಿದೆಸೆಯಿಂದಲೇ ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ. ಅಂದು, ಇಂದು, ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದರು.

ವಿಭೂತಿಯಲ್ಲಿ ಮಿಂಚಿದ ಸಿಎಂ

ಸಾಮಾನ್ಯವಾಗಿ ತಿಲಕಗಳಿಂದ ದೂರವೇ ಉಳಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ಸಂಸ್ಕೃತಿ ಸಮಾವೇಶದಲ್ಲಿ ವಿಭೂತಿಯನ್ನಿಟ್ಟುಕೊಂಡಿದ್ದು, ಎಲ್ಲರ ಆಕರ್ಷಣೆ ಹಾಗೂ ಆಭಿಮಾನಕ್ಕೂ ಪಾತ್ರರಾದರು. ಸ್ವತಃ ಸ್ವಾಮೀಜಿಗಳು ಮುಖ್ಯಮಂತ್ರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ ಸಭಿಕರು ಜೋರಾದ ಕರತಾಡನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net