ವಚನ ವಿಶ್ವದ ಮೇರು ಸಾಹಿತ್ಯ

12mdk05
Published on

ಮಡಿಕೇರಿ : ವಚನಕಾರರ ಪರಂಪರೆಯ ಮರೆತು ಹೋದ ಮೌಲ್ಯಗಳನ್ನು ಪುನಃ ಸ್ಮರಣೆ ಮಾಡುವ ಕೆಲಸ ವಚನಗಳ ಪಠಣ ಹಾಗೂ ಮನನದಿಂದ ಆಗಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಕುಶಾಲನಗರ ತಾಲೂಕಿನ ಬಸವನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಜಿಲ್ಲೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ. ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಕಂದಾಚಾರ ಹಾಗೂ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿ ಕ್ರಾಂತಿ ಉಂಟು ಮಾಡಿದ ಶರಣರ ವಚನಗಳು ಅಧ್ಯಾತ್ಮದ ನೆಲೆಯೊಳಗೆ ಬದುಕಿನ ಸಾರ ತತ್ವವನ್ನು ಸಾರಿ ಜಟಿಲವಾಗಿದ್ದ ಮನುಷ್ಯನ ಬದುಕನ್ನು ಸರಳಗೊಳಿಸಿದ ದೀವಿಗೆಯಾಗಿದೆ ಎಂದರು.


ಹನ್ನೆರಡನೇ ಶತಮಾನದ ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ ಅವರ ಆದರ್ಶಗಳು ಇಂದಿನ ಜೀವನದ ಪಾಠಗಳಾಗಬೇಕಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೇವಲ ಪದವಿಗಳಿಗೆ ಸೀಮಿತವಾಗದೇ ಜೀವನದ ಲೌಕಿಕ ಜ್ಞಾನವನ್ನು ನೀಡಬೇಕಿದೆ ಎಂದು ಹೇಳಿದರು.


ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿದ್ದ ಜಡತೆ ಮತ್ತು ಜಾತಿಯ ಕತ್ತಲು, ಜಾತಿಭೇದ, ಮೇಲು - ಕೀಳೆಂಬ ಅಜ್ಞಾನದ ಕತ್ತಲನ್ನು ಕಳೆದು ವಚನಗಳ ಮೂಲಕ ಜ್ಞಾನದ ಬೆಳಕು ಸಾರಿದ ವಚನಕಾರರ ಸಂದೇಶಗಳು ಇಂದಿನ ಜನಮಾನಸಕ್ಕೆ ಅತಿ ಉಪಯುಕ್ತವಾಗಿದೆ. ಮನುಷ್ಯನ ಉತ್ತಮ ಜೀವನಕ್ಕೆ ಕಳಬೇಡ, ಕೊಲಬೇಡ, ಹುಸಿಯ ನುಡಿಯ ಬೇಡ ಎಂಬ ವಚನವೊಂದರ ಸಾರ ಸಾಕು ಎಂದರು.


ಬಸವನಹಳ್ಳಿ ಮುರಾರ್ಜಿ ದೇಸಾಯಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಪ್ರಕಾಶ್, ಮಡಿಕೇರಿ ಲಯನ್ಸ್ ಅಧ್ಯಕ್ಷ ಮೋಹನಕುಮಾರ್, ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಕೋಶಾಧಿಕಾರಿ ಸಿ.ಎ.ರಾಜು, ಉಪನ್ಯಾಸಕರಾದ ಕೆ.ಆರ್.ರಮೇಶ್, ವರ್ಷಾ, ಶಿವಕುಮಾರ್, ಸಂಗೀತಾ ಶಿಕ್ಷಕ ಪುಟ್ಟರಾಜು ಇದ್ದರು. ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net