

ಚೀನಾ, ರಷ್ಯಾ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಮತ್ತೆ ಕರೊನಾ ಮಹಾಮಾರಿ ಉಲ್ಬಣಗೊಳ್ಳುತ್ತಿದೆ. ಭಾರತದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಮುನ್ನೆಚ್ಚರಿಕೆಯ ಕ್ರಮಗಳ ವಿಷಯದಲ್ಲಿ ಮೈಮರೆಯುವಂತಿಲ್ಲ. ಕರೊನಾ ಸೋಂಕು ಹರಡಿದ್ದು ಚೀನಾದಿಂದಲೇ ಎಂಬುದು ತಿಳಿದಿರುವ ಸಂಗತಿಯೇ ಆಗಿದ್ದರೂ, ಆ ದೇಶ ಮಾತ್ರ ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವ ಚೀನಾ ಕರೊನಾ ಮೂಲದ ವಿಷಯವನ್ನು ಒಪ್ಪಿಕೊಂಡುಬಿಟ್ಟರೆ ಜಾಗತಿಕವಾಗಿ ಮುಖಭಂಗಕ್ಕೀಡಾಗಬೇಕಾಗುತ್ತದೆ ಎಂಬ ಭಯದಲ್ಲಿ ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಕರೊನಾ ವೈರಸ್ ಮೂಲ ಪತ್ತೆ ಮಾಡಿದವರಿಗೆ 15 ಸಾವಿರ ಡಾಲರ್ ನೀಡುವುದಾಗಿ ಚೀನಾ ಸರ್ಕಾರ ಘೋಷಣೆ ಮಾಡಿರುವುದು ಅದೇ ‘ನಾಟಕ’ದ ಮುಂದುವರಿದ ಭಾಗವಷ್ಟೇ. ಅದೇನೇ ಇರಲಿ, ಮಕ್ಕಳಿಗೆ ಕರೊನಾ ಲಸಿಕೆ ನೀಡಲು ಭಾರತ ಸಜ್ಜಾಗಿದೆ. ಶಾಲೆ, ಕಾಲೇಜುಗಳು ಆರಂಭವಾಗಿರುವುದರಿಂದ ಮಕ್ಕಳಿಗೆ ಲಸಿಕೆ ಯಾವಾಗ ಎಂಬ ನಿರೀಕ್ಷೆ ಪಾಲಕರಲ್ಲೂ, ಬೋಧಕವೃಂದದವರಲ್ಲೂ ಇತ್ತು.
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಝೈಕೋವ್-ಡಿ ವ್ಯಾಕ್ಸಿನ್ನ ಒಂದು ಕೋಟಿ ಡೋಸ್ (ಮೂರು ಡೋಸ್ ವ್ಯಾಕ್ಸಿನ್)ಅನ್ನು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಕಂಪನಿಯಿಂದ ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೂರು ಡೋಸ್ಗಳ ಈ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಈ ಚುಚ್ಚುಮದ್ದನ್ನು ನೀಡುವ ಬಗ್ಗೆ ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕರ್ನಾಟಕದಲ್ಲಂತೂ ಈಗಾಗಲೇ ಮಕ್ಕಳ ದತ್ತಾಂಶ ಸಂಗ್ರಹಿಸಲಾಗಿದ್ದು, ಮುಂದಿನ ವಾರದಿಂದ ಲಸಿಕೆ ನೀಡುವಿಕೆ ಆರಂಭಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಗಮನಾರ್ಹ.
ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಲಸಿಕೆ ಅಗತ್ಯವಾಗಿತ್ತು. ವಯಸ್ಕರಿಗೆ ನೀಡುತ್ತಿರುವ ಲಸಿಕೆ ಅಭಿಯಾನವೂ, ಇನ್ನಷ್ಟು ವೇಗ ಪಡೆಯಬೇಕಿದೆ. ಕರೊನಾ ವಿರುದ್ಧದ ಸಮರದಲ್ಲಿ ಮಕ್ಕಳಿಗೆ ಲಸಿಕೆ ವಿತರಣೆ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ. ಅಂತಾರಾಷ್ಟ್ರೀಯ ವಲಯವನ್ನು ಗಮನಿಸಿದಾಗ, 12 ವರ್ಷದೊಳಗಿನ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಬ್ರಿಟನ್ ಜುಲೈ 19ರಂದು ಅನುಮತಿ ನೀಡಿದೆ. ಇಸ್ರೇಲ್ 16 ವರ್ಷದವರೆಗಿನ ಮಕ್ಕಳಿಗೆ ಈ ವರ್ಷದ ಜನವರಿಯಿಂದಲೇ ಲಸಿಕೆ ನೀಡುತ್ತಿದೆ. ಕೆನಡಾ ಒಂದು ಹೆಜ್ಜೆ ಮುಂದೆ ಹೋಗಿ 2020ರ ಡಿಸೆಂಬರ್ನಿಂದಲೇ 16 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ನೀಡುತ್ತಿದೆ. ಮಾಲ್ಟಾ, ಚಿಲಿಯಂಥ ಪುಟ್ಟ ರಾಷ್ಟ್ರಗಳಲ್ಲೂ ಈ ಪ್ರಕ್ರಿಯೆ ಆರಂಭವಾಗಿದೆ.
ಕಳೆದ ಕೆಲವು ತಿಂಗಳಲ್ಲೇ ಭಾರತದಲ್ಲಿ ಸಾವಿರಾರು ಮಕ್ಕಳು ಸೋಂಕಿತರಾಗಿದ್ದು, ಕೆಲವರು ಗಂಭೀರ ಲಕ್ಷಣ ಹೊಂದಿದ್ದಾರೆ. ಲಸಿಕೆ ಶೀಘ್ರದಲ್ಲೇ ಬರುವಂತಾದರೆ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚುವಲ್ಲಿ, ಕರೊನಾ ನಿಯಂತ್ರಿಸುವಲ್ಲಿ ಮಹತ್ವಪೂರ್ಣ ಮತ್ತು ನಿರ್ಣಾಯಕ ಕ್ರಮವಾಗಬಲ್ಲದು. ಈ ಅಭಿಯಾನವನ್ನು ವ್ಯವಸ್ಥಿತವಾಗಿ, ಕಾಳಜಿಯಿಂದ ನಿರ್ವಹಿಸಬೇಕಾದ ಹೊಣೆಗಾರಿಕೆ ವ್ಯವಸ್ಥೆಯ ಮೇಲಿದೆ.