

ಶಿವಮೊಗ್ಗ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಸೆ.26ರಿಂದ ಅ.25ರವರೆಗೆ ಕಾಲುಬಾಯಿ ರೋಗ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು.
ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ರೋಗವನ್ನು ತಡೆಯಲು ದನ, ಎಮ್ಮೆ ಮತ್ತು ಕರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕೆಂದು ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹೇಳಿದರು.
ಕಾಲುಬಾಯಿ ರೋಗ ನಿರ್ಮೂಲನೆ ದೃಷ್ಟಿಯಿಂದ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸುವುದು ಕಡ್ಡಾಯ. ಪಶುಪಾಲನಾ ಇಲಾಖೆ ಸಿಬ್ಬಂದಿ ಪ್ರತಿ ಮನೆಗೂ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಕಾರ್ಯಕ್ರಮದಲ್ಲಿ ನಾವು ಶೇ.100 ಫಲಿತಾಂಶ ಪಡೆಯಬೇಕಿದೆ ಎಂದರು.
ಹೊಸನಗರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಕೃತಕ ಗರ್ಭಧಾರಣೆ ಪ್ರಗತಿ ಸ್ವಲ್ಪ ಕಡಿಮೆಯಿದ್ದು, ಇದನ್ನು ಹೆಚ್ಚಿಸಬೇಕಿದೆ. ದೀಪಾವಳಿ ಸಂದರ್ಭ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವವರು ಮುಂಚಿತವಾಗಿ ಪಶುಪಾಲನಾ ಇಲಾಖೆಯಿಂದ 15 ದಿನಗಳ ಮುನ್ನ ಅನುಮತಿ ಪಡೆಯಬೇಕೆಂದು ತಿಳಿಸಿದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಯೋಗಿ ಯಲಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,586 ಗ್ರಾಮಗಳಿದ್ದು, ಕಾಲುಬಾಯಿ ರೋಗಕ್ಕೆ 4ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ 6,39,250 ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 6,53,573 ಸಿರಿಂಜ್‌ಗಳು ಲಭ್ಯವಿದ್ದು, ಸರಬರಾಜಾದ ಲಸಿಕೆ ಶೇಖರಿಸಲು 4 ವಾಕ್ ಇನ್ ಕೂಲರ್ ಮತ್ತು 23 ಐಸ್‌ಲೈನ್ ರೆಫ್ರಿಜರೇಟರ್‌ಗಳಿವೆ. ಲಸಿಕೆ ನೀಡಲು 467 ಸಿಬ್ಬಂದಿ ನಿಯೋಜಿಸಲಾಗಿದೆ. 3ನೇ ಲಸಿಕಾ ಅಭಿಯಾನದಲ್ಲಿ 5,54,010 ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ.95 ಪ್ರಗತಿ ಸಾಧಿಸಲಾಗಿತ್ತು ಎಂದು ತಿಳಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್, ಶಿಮುಲ್ ಮಾರುಕಟ್ಟೆ ವ್ಯವಸ್ಥಾಪಕ ಡಾ. ಮುರಳಿ ಇತರರಿದ್ದರು.