

ನವದೆಹಲಿ: ಭಾರತದ ಕರೊನಾ ಲಸಿಕೆ ಅಭಿಯಾನಕ್ಕೆ ಜನವರಿ 16ರಂದು ಒಂದು ವರ್ಷ ಪೂರ್ಣಗೊಂಡಿದೆ. ಜಗತ್ತಿನ ಅತಿ ದೊಡ್ಡ ಹಾಗೂ ಅತಿ ವೇಗದ ಅಭಿಯಾನ ಇದಾಗಿದ್ದು, ಒಟ್ಟು 156.76 ಕೋಟಿ ಡೋಸ್ ಚುಚ್ಚುಮದ್ದು ಹಾಕಲಾಗಿದೆ. ಶೇಕಡ 70 ವಯಸ್ಕರು, ಅಂದರೆ ಸುಮಾರು 65 ಕೋಟಿ ಫಲಾನುಭವಿಗಳು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಶೇಕಡ 93ಕ್ಕಿಂತಲೂ ಅಧಿಕ ವಯಸ್ಕರು ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.
138 ಕೋಟಿ ಜನಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳಿಗೆ ಕರೊನಾ ತಡೆ ಲಸಿಕೆ ಹಾಕುವ ಕಾರ್ಯದಲ್ಲಿ ಭಾರತ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಈ ಲಸಿಕೆ ಅಭಿಯಾನದ ಪಯಣದಲ್ಲಿ ದೇಶ ಹಲವು ಸವಾಲುಗಳನ್ನೂ ಎದುರಿಸಿದೆ. ಒಳನಾಡು ಹಾಗೂ ಬೆಟ್ಟಗುಡ್ಡ ಪ್ರದೇಶಗಳಿಗೆ ಲಸಿಕೆ ಸಾಗಿಸಿ ಅಲ್ಲಿನ ನಿವಾಸಿಗಳಿಗೆ ವ್ಯಾಕ್ಸಿನ್ ಹಾಕಲಾಗಿದೆ. ಈಗ ‘ಮುನ್ನೆಚ್ಚರಿಕೆ’ (ಬೂಸ್ಟರ್) ಡೋಸ್ ಕೂಡ ನೀಡಲಾಗುತ್ತಿದೆ. 15-18 ವಯೋಮಿತಿಯ ಮಕ್ಕಳಿಗೂ ಕೋವಿಡ್ ಲಸಿಕೆ ಹಾಕುವ ಯೋಜನೆಯನ್ನು ಕೇಂದ್ರ ಸರ್ಕಾರ ಜನವರಿ 3ರಂದು ಚಾಲನೆ ನೀಡಿದೆ.
ಪ್ರಧಾನಿ ಶ್ಲಾಘನೆ: ವ್ಯಾಕ್ಸಿನ್ ಅಭಿಯಾನ ಒಂದು ವರ್ಷ ಪೂರೈಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಸಹಿತ ಹಲವು ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
2.71 ಲಕ್ಷ ಹೊಸ ಕೇಸ್:ದೇಶದಲ್ಲಿ ಕರೊನಾ ಸೋಂಕು ನಾಗಾಲೋಟದಿಂದ ಮುನ್ನುಗ್ಗುತ್ತಿದ್ದು ಭಾನುವಾರ 2,71,202 ಹೊಸ ಕೇಸ್ಗಳು ದೃಢಪಟ್ಟಿವೆ. 314 ಜನರು ಮೃತಪಟ್ಟಿದ್ದು, ಸಾಂಕ್ರಾಮಿಕತೆಗೆ ಬಲಿಯಾದವರ ಒಟ್ಟು ಸಂಖ್ಯೆ 4,86,066ಕ್ಕೆ ತಲುಪಿದೆ. ದೇಶದಲ್ಲಿ ಮಾರಕ ಒಮಿಕ್ರಾನ್ ಕೇಸ್ಗಳ ಸಂಖ್ಯೆ 7,743ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮುಂಬೈಯಲ್ಲಿ ಹೆಚ್ಚಿದ ಸಾವು: ಮುಂಬೈಯಲ್ಲಿ ಕರೊನಾ ದೈನಿಕ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ನಿತ್ಯದ ಸಾವಿನ ಸಂಖ್ಯೆ ಎರಡಂಕಿ ದಾಟಿರುವುದು ಕಳವಳಕ್ಕೆ ಕಾರಣವಾಗಿದೆ. ಭಾನುವಾರ 11 ಜನರು ಸೋಂಕಿಗೆ ಬಲಿಯಾಗಿದ್ದು ಐದು ತಿಂಗಳಲ್ಲಿ ಅಧಿಕ ನಿತ್ಯದ ಸಾವಾಗಿದೆ.
ಮಾರ್ಚ್ನಲ್ಲಿ ಸೋಂಕು ಅಂತ್ಯ: ಭಾರತದಲ್ಲಿ ಕೋವಿಡ್ ಸೋಂಕು ಮಾರ್ಚ್ ಮಧ್ಯ ಭಾಗದೊಳಗೆ ಹೆಚ್ಚು ಕಡಿಮೆ ಅಂತ್ಯಗೊಳ್ಳುವ ಸಂಭವವಿದೆ ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿ ಜನವರಿ ಮಧ್ಯದಲ್ಲಿ ಸೋಂಕು ಉತ್ತುಂಗ ತಲುಪಲಿದ್ದು ದೇಶದಲ್ಲಿ ಪ್ರತಿ ದಿನ 4ರಿಂದ 8 ಲಕ್ಷ ಪ್ರಕರಣ ದಾಖಲಾಗಲಿವೆ ಎಂದು ಅವರು ಲೆಕ್ಕಾಚಾರದ ಮಾದರಿಯ ಆಧಾರದಲ್ಲಿ ಭವಿಷ್ಯ ನುಡಿದಿದ್ದಾರೆ.
ಶಾಲೆ ಮುಚ್ಚುವುದು ಸರಿಯಲ್ಲ: ಕರೊನಾ ಸಾಂಕ್ರಾಮಿಕತೆಯ ಕಾರಣ ಮುಂದೊಡ್ಡಿ ಶಾಲೆಗಳನ್ನು ಮುಚ್ಚುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ಸೋಂಕಿನ ಹೊಸ ಅಲೆಯಿದ್ದರೂ ಶಾಲೆಗಳನ್ನು ಮುಚ್ಚು ವುದು ಕೊನೆಯ ಆಯ್ಕೆಯಾಗ ಬೇಕು ಎಂದು ವಿಶ್ವ ಬ್ಯಾಂಕ್ನ ಜಾಗತಿಕ ಶಿಕ್ಷಣ ನಿರ್ದೇಶಕ ಜೇಮ್ ಸಾವೇದ್ರ ಹೇಳಿದ್ದಾರೆ.
ಜಲ್ಲಿಕಟ್ಟು ವೇಳೆ ನಿಯಮ ಉಲ್ಲಂಘನೆ: ತಮಿಳುನಾಡಿನ ಬಹುತೇಕ ಕಡೆ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ನಡೆದ ಹೋರಿಗಳ ಜಲ್ಲಿಕಟ್ಟು ಕ್ರೀಡೆಯಲ್ಲಿ ಕರೊನಾ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಜನರು ಭಾಗವಹಿಸಿದ್ದರು. ಸಾಮಾಜಿಕ ಅಂತರ, ಮಾಸ್ಕ್ ನಿಯಮ ಪಾಲನೆ ಆಗಿಲ್ಲ.