

ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕೆನ್ನುವ ರಾಜ್ಯ ಪ್ರಾಥಮಿಕ ಶಿಕಕ್ಷಕರ ಸಂಘದ ಮನವಿ ಮೇರೆಗೆ ಅ.18ರವರೆಗೆ ಅಂದರೆ 10 ದಿನಗಳ ಕಾಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತು ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.90ರಷ್ಟು ಜನರು ಸಮೀಕ್ಷೆಗೆ ಸಹಕಾರ ನೀಡಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ತರಬೇತಿ ಹಾಗೂ ಚುನಾವಣಾ ಆಯೋಗದ ಕೆಲಸಗಳ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಸ್ವಲ್ಪ ತಡವಾಗಿ ಆರಂಭಿಸಿದ್ದೇವೆ. ಈ ಭಾಗದಲ್ಲಿ ಸಮೀಕ್ಷೆ ಮಂದಗತಿಯಲ್ಲಿದ್ದು, ಶೇ.25ರಷ್ಟು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಐದೂ ಪಾಲಿಕೆ ಆಯುಕ್ತರು ಹಾಗೂ ಶಿಕ್ಷಣ ಇಲಾಖೆಯ ಜತೆಗೆ ಸಭೆ ಮಾಡಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಎಲ್ಲ ಜನರಿಗೆ ನ್ಯಾಯ ಒದಗಿಸಿಕೊಡಲು ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಬೆಂಗಳೂರು ನಗರದಲ್ಲಿರುವ ಜನರು ಈ ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಸಮೀಕ್ಷೆಯಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿಯೂ ಸಾರ್ವಜನಿಕರು ಮಾಹಿತಿ ಸಲ್ಲಿಸಬಹುದು.
ಜನರಿಗೆ ಇಚ್ಛೆಯಿರುವಷ್ಟು ಮಾಹಿತಿ ನೀಡಬಹುದು. ಇಲ್ಲಿ ಸರ್ಕಾರ ಹೆಚ್ಚಿನ ಒತ್ತಡ ಹಾಕುವುದಿಲ್ಲ. ಗ್ರಾಮೀಣ ಭಾಗದ ಜನರ ಬದುಕಿನ ಪ್ರಗತಿ ಬಗ್ಗೆ ಅರಿಯಲು ಕೆಲವು ಪ್ರಶ್ನೆಗಳನ್ನು ಸೇರಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಅನೇಕರು ಗ್ರಾಮೀಣ ಭಾಗದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಜೀವನದಲ್ಲಿ ಶೈಕ್ಷಣಿಕ ಪರಿಸ್ಥಿತಿ, ಆರ್ಥಿಕ ಶಕ್ತಿ ಬಗ್ಗೆ ತಿಳಿಯಲು ಸರ್ಕಾರ ಪ್ರಯತ್ನಿಸುತ್ತಿದ್ದು, ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇವೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರ ನೇತೃತ್ವದಲ್ಲಿ ಸಿಎಂ ಹಾಗೂ ನನ್ನನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ. ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಕೋರಿಕೆಗೆ ಒಪ್ಪಿದ್ದು, ಇದು, ಖಾಸಗಿ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ ಎಂದರು.
ವೀರಶೈವ-ಲಿಂಗಾಯತರು ಸೇರಿ ನಾವು ಯಾರನ್ನೂ ವಿಭಜಿಸುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಆ ಸಮಾಜ ಹಾಗೂ ಜನರಿಗೆ ಬಿಡುತ್ತೇವೆ. ಈ ಸಮುದಾಯದ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಮಾತ್ರ ಅವರ ಸಮುದಾಯದ ಗುರುತು ಕೇಳುತ್ತಿದ್ದೇವೆ. ಇದರ ಹೊರತಾಗಿ ನಮ್ಮ ಮುಂದೆ ಬೇರೆ ಯಾವುದೇ ಆಲೋಚನೆಗಳಿಲ್ಲ. ಅವುಗಳ ಬಗ್ಗೆ ನಾವು ಚಿಂತಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.