

ನವದೆಹಲಿ: ಕಾಶ್ಮೀರವು ಪಾಕಿಸ್ತಾನ ‘ಕತ್ತಿನ ನರವಾಗಿದೆ’. ಅದು ಹಾಗೆಯೇ ಮುಂದುವರಿಯಲಿದ್ದು ತಮ್ಮ ದೇಶ ಅದನ್ನು ‘ಮರೆಯುವುದಿಲ್ಲ’ ಎಂದು ಪಾಕಿಸ್ತಾನದ ಭೂ ಸೇನಾ ಮುಖ್ಯಸ್ಥ ಜನರಲ್ ಅಸಿಂ ಮುನೀರ್ ಹೇಳಿದ್ದು ಭಾರತ ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ತ್ವರಿತವಾಗಿ ಖಾಲಿ ಮಾಡಿ ಎಂದು ಭಾರತದ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.
1947ರ ದೇಶ ವಿಭಜನೆಗೆ ಆಧಾರವಾಗಿದ್ದ ದ್ವಿರಾಷ್ಟ್ರ ಸಿದ್ಧಾಂತವನ್ನೂ ಮುನೀರ್ ಸಮರ್ಥಿಸಿಕೊಂಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಯರನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ನಾವು ಒಂದು ‘ಶ್ರೇಷ್ಠ ಸಿದ್ಧಾಂತ ಮತ್ತು ಸಂಸ್ಕೃತಿಗೆ’ ಸೇರಿದವರೆನ್ನುವು ದನ್ನು ಮರೆಯಬಾರದು. ಪಾಕಿಸ್ತಾನದ ಕಥೆಯನ್ನು ಖಂಡಿತವಾಗಿಯೂ ನಮ್ಮ ಮಕ್ಕಳಿಗೆ ಹೇಳಬೇಕು. ‘ನಾವು ಪ್ರತಿ ವಿಚಾರದಲ್ಲೂ ಹಿಂದುಗಳಿಗಿಂತ ಶ್ರೇಷ್ಠರು ಎಂದು ನಮ್ಮ ಪೂರ್ವಜರು ಭಾವಿಸಿದ್ದರು. ನಮ್ಮ ಧರ್ಮಗಳು, ಪದ್ಧತಿಗಳು, ಪರಂಪರೆಗಳು, ಚಿಂತನೆಗಳು ಮತ್ತು ಮಹತ್ವಾಕಾಂಕ್ಷೆಗಳು ಭಿನ್ನವಾಗಿದ್ದು ಅವೇ ದ್ವಿರಾಷ್ಟ್ರ ಸಿದ್ಧಾಂತದ ಅಡಿಪಾಯವೇ ಆಗಿವೆ’ ಎಂದು ಮುನೀರ್ ಪ್ರತಿಪಾದಿಸಿದ್ದಾರೆ.
ಭಾರತೀಯ ಸೇನೆ ಬಗ್ಗೆ ಕುಹಕ: ಭಯೋತ್ಪಾದನೆ ಚಟುವಟಿಕೆಗಳ ಕಾರಣದಿಂದ ಪಾಕ್ಗೆ ಬಂಡವಾಳ ಸಿಗುವುದಿಲ್ಲ ಎಂದು ಕೆಲವರು ಭಯಪಡುತ್ತಾರೆ ಎಂದು ಮುನೀರ್ ಹೇಳಿದರು. ಭಯೋತ್ಪಾದಕರು ದೇಶದ ವಿಧಿಯನ್ನು ಕಸಿದುಕೊಳ್ಳಬಲ್ಲರೆಂದು ನೀವು ಭಾವಿಸಿದ್ದೀರಾ ಎಂದು ಪ್ರಶ್ನಿಸಿದ ಮುನೀರ್, ನಮ್ಮನ್ನು ಮಣಿಸಲು ಸರ್ವಸಜ್ಜಿತವಾದ 13 ಲಕ್ಷದಷ್ಟು ಬಲಿಷ್ಠವಾದ ಭಾರತೀಯ ಸೇನೆಗೇ ಆಗದಿರುವಾಗ ಈ ಭಯೋತ್ಪಾದಕರು ನಮ್ಮ ಸಶಸ್ತ್ರ ಪಡೆಗಳನ್ನು ಹಣಿಯ ಬಹುದೆಂದು ಭಾವಿಸುತ್ತೀರಾ ಎಂದು ಕೇಳಿದರು.
ಪಾಕ್ ಸೇನಾ ಮುಖ್ಯಸ್ಥರ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನ ದೊಂದಿಗಿನ ಏಕೈಕ ಸಂಬಂಧವೆಂದರೆ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಖಾಲಿ ಮಾಡಿಸುವುದು ಎಂದು ಭಾರತ ಸ್ಪಷ್ಟಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿ, ಜಮ್ಮು ಮತ್ತು ಕಾಶ್ಮೀರವು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ. ಇದು ಭಾರತದ ರಕ್ತನಾಳದಲ್ಲಿ ಒಂದಾಗಿದೆ. ಪಾಕಿಸ್ತಾನವು ತನ್ನ ಅಕ್ರಮ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ತಿಳಿಸಿದ್ದಾರೆ. ದ್ವಿ-ರಾಷ್ಟ್ರ ಕುರಿತ ಮುನೀರ್ ಹೇಳಿಕೆಯು ಅವರ ‘ತೀವ್ರ ಹತಾಶೆಯನ್ನು’ ಪ್ರದರ್ಶಿಸುತ್ತದೆ. ತಾನು ವಿಫಲ ರಾಷ್ಟ್ರವೊಂದರ ಜನರಲ್ ಎಂಬುದನ್ನು ಸ್ವತಃ ಅವರೇ ಸಾಬೀತುಪಡಿಸಿಕೊಳ್ಳಲು ನಿರ್ಧರಿಸಿದಂತಿದೆ ಎಂದು ಭಾರತ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ತಾನು ಮುಸ್ಲಿಮರ ಜಾಗತಿಕ ರಕ್ಷಕ ಎಂದು ಬಿಂಬಿಸಿಕೊಳ್ಳುವುದು ಅವರ ಪ್ರಯತ್ನವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.