ಬೆಂಗಳೂರು: ಇತ್ತೀಚೆಗೆ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುತ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಈ ಬಗ್ಗೆ ಅನೇಕ ನಾಯಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಚುನಾವಣೆ ಹತ್ತಿರ ಇರುವಾಗ ಇಷ್ಟೆಲ್ಲಾ ಬೆಳವಣಿಗೆಗಳು ಆಗುವಾಗ ಪ್ರಶ್ನೆಗಳು ಏಳುವುದು ಸಹಜ.
ಈ ನಡುವೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಚಿವ ವಿ ಸೋಮಣ್ಣ ಇಂದು ವಿಮಾನದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು ಇನ್ನಷ್ಟು ಪ್ರಶ್ನೆಗಳಿಗೂ ಕಾರಣವಾಗಿತ್ತು. ಈ ಬಗ್ಗೆ ಈಗಾಗಲೇ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು ಈ ಬಗ್ಗೆ ಇದೀಗ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸೋಮಣ್ಣ ಹೇಳಿಕೆ ನೀಡಿದ್ದು 'ನಾನು ಬಿಜೆಪಿ ಬಿಡಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನನ್ನ ಮಗನಿಗೆ ಟಿಕೆಟ್ ಕೊಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು. ಬಿಎಲ್ ಸಂತೋಷ್ ನನ್ನ ಮಾರ್ಗದರ್ಶಕರು. ರಾಜಕಾರಣ ಯಾವ ರೀತಿ ಮಾಡಬೇಕು ಎನ್ನುವುದು ಗೊತ್ತಿದೆ' ಎಂದು ಹೇಳಿಕೆ ನೀಡಿದ್ದು ಬಿಜೆಪಿ ಬಿಡುವ ಊಹಾಪೋಹಗಳಿಗೆ ಸೋಮಣ್ಣ ತೆರೆ ಎಳೆದಿದ್ದಾರೆ.