ಎಡೆಬಿಡದೆ ಸುರಿಯುತ್ತಿರುವ ಮಳೆ: ತಪಕೇಶ್ವರ ಮಹಾದೇವ ದೇವಸ್ಥಾನದ ಒಂದು ಭಾಗ ಕುಸಿದು ಸಂಚಾರಕ್ಕೆ ಅಡಚಣೆ

rain
Published on

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ನದಿಗಳ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಡೆಹ್ರಾಡೂನ್‌ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಾಲಯದ ಒಂದು ಭಾಗವು ಕುಸಿದಿದೆ.

ಭಕ್ತರಿಗೆ ತೊಂದರೆ
ಈ ಹಿಂದೆ ಮರಗಳು ಬಿದ್ದು, ದೇವಾಲಯದ ಪ್ರವೇಶ ದ್ವಾರಕ್ಕೆ ಹೋಗುವ ದಾರಿ ಭಾಗಶಃ ಬಂದ್ ಆಗಿತ್ತು. ಇದೀಗ ದೇವಸ್ಥಾನದ ಒಂದು ಭಾಗ ಕುಸಿದು ಬಿದ್ದಿರುವುದರಿಂದ, ಸೋಮವಾರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಜಖಾನ್ ಗ್ರಾಮದಲ್ಲಿ 15 ಮನೆಗಳು ಕುಸಿತ
ಇದಕ್ಕೂ ಮುನ್ನ ಆಗಸ್ಟ್ 16 ರಂದು ಡೆಹ್ರಾಡೂನ್ ಬಳಿಯ ಲಾಂಘಾ ರಸ್ತೆಯಲ್ಲಿರುವ ಮದ್ರಾಸು ಗ್ರಾಮ ಪಂಚಾಯತ್‌ನ ಭಾಗವಾದ ಜಖಾನ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, 15 ಮನೆಗಳು ಕುಸಿದು, ಏಳು ಗೋಶಾಲೆಗಳು ಸಂಪೂರ್ಣವಾಗಿ ನಾಶವಾಗಿವೆ. ಮನೆಗಳಲ್ಲಿ 50 ಜನರು ಇದ್ದರು ಎನ್ನಲಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಿಗೆ ನುಗ್ಗಿದ ಮಳೆ ನೀರು
ಮತ್ತೊಂದೆಡೆ, ಕಳೆದ ವಾರ ಡೆಹ್ರಾಡೂನ್‌ನ ಕಲುವಾಲಾ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ.

ರಸ್ತೆಗಳಲ್ಲಿ ನಿಂತ ಧಾರಾಕಾರ ನೀರು
ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಪ್ರಕಾರ, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ಭಾರೀ ನೀರು ನಿಂತಿದೆ ಮತ್ತು ಡೆಹ್ರಾಡೂನ್‌ನ ಕಲುವಾಲಾ ಪ್ರದೇಶದಲ್ಲಿ ಮಳೆನೀರು ಜನರ ಮನೆಗಳಿಗೆ ನುಗ್ಗಿ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ವೈಮಾನಿಕ ಸಮೀಕ್ಷೆ
ಇದಕ್ಕೂ ಮುನ್ನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ರಿಷಿಕೇಶದಲ್ಲಿ ಗಂಗಾ ನದಿಯ ನೀರಿನ ಮಟ್ಟವನ್ನು ಪರಿಶೀಲಿಸಿದರು. ಈ ಬಾರಿಯ ಮಾನ್ಸೂನ್‌ನಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಲವೆಡೆ ಭೂಕುಸಿತ ಮತ್ತು ಪ್ರವಾಹದ ಸಮಸ್ಯೆ ತಲೆದೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net