

ಉತ್ತರಕಾಶಿ (ಉತ್ತರಾಖಂಡ): ಈ ಕಥೆ ಶುರುವಾಗುವುದು 1975ರಲ್ಲಿ. ಉತ್ತರಕಾಶಿಯ ಜೆಸ್ವಾಡಿ ಗ್ರಾಮದ 34-35 ವರ್ಷದ ಯುವಕ ಸೂರತ್ ಸಿಂಗ್ ಚೌಹಾನ್ ಹೆಂಡತಿ ಹಾಗೂ ಕುಟುಂಬದವರ ಜತೆ ಜಗಳವಾಡಿದ್ದ. ಈತನ ಮುನಿಸು ಅದೆಷ್ಟು ರೌದ್ರಸ್ವರೂಪ ಪಡೆದಿತ್ತು ಎಂದರೆ ಮನೆ ಬಿಟ್ಟು ಹೊರಟೇಬಿಟ್ಟ!
ಹೆಂಡತಿ, ಪುಟ್ಟ ಮಕ್ಕಳ ಮುಖವನ್ನೂ ನೋಡದೆ, ತಾನೇನು ಮಾಡುತ್ತಿದ್ದೇನೆ ಎಂಬ ಪರಿವೆಯೂ ಇಲ್ಲದೇ, ಎಲ್ಲರನ್ನೂ ಒಂಟಿಯಾಗಿಸಿ ಹೋಗಿಯೇಬಿಟ್ಟ ಈ ಯುವಕ. ಅಷ್ಟೇ.... ಈತ ಎಲ್ಲಿ ಹೋದನೋ, ಹೇಗಿದ್ದಾನೋ, ಸತ್ತಿದ್ದಾನೋ, ಬದುಕಿದ್ದಾನೋ ಏನೊಂದೂ ಕುಟುಂಬಸ್ಥರಿಗೆ ತಿಳಿಯದಾಯಿತು.
ಆತನನ್ನು ಹುಡುಕಿ ಹುಡುಕಿ ಸಾಕಾಗಿಹೋಯಿತು ಹೆಂಡತಿಗೆ. ಒಂದೆರಡು ವರ್ಷ ಕಳೆದೇ ಹೋದವು. ಸೂರತ್ ವಾಪಸ್ ಬರದಾಗ ಈತ ಸತ್ತುಹೋಗಿರಬಹುದು ಎಂದೇ ಎಲ್ಲರೂ ಅಂದುಕೊಂಡರು. ಪೊಲೀಸರು ಕೂಡ ಹುಡುಕಾಟ ನಡೆಸಿದ್ದರೂ ಈತ ಸಿಕ್ಕಿರಲಿಲ್ಲ. ನಂತರ ಪೊಲೀಸರು ಕೂಡ ಈ ಪ್ರಕರಣವನ್ನು ಅಲ್ಲಿಗೇ ಬಿಟ್ಟುಬಿಟ್ಟಿದ್ದರು.
ಪುಟ್ಟಪುಟ್ಟ ಮಕ್ಕಳ ಜವಾಬ್ದಾರಿಯನ್ನು ಏಕಾಂಗಿಯಾಗಿ ಈತನ ಪತ್ನಿ ಹೊತ್ತುಕೊಂಡಳು. ಹಾಗೂ ಹೀಗೂ ಮಾಡಿ, ಅಲ್ಲಲ್ಲಿ ಕೆಲಸ, ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕಿದಳು. ವರ್ಷ ಹತ್ತಾಯಿತು, ಇಪ್ಪತ್ತಾಯಿತು.... ಹೀಗೆ ಸೂರತ್ ಹೋಗಿ ಬರೋಬರಿ 45 ವರ್ಷವೇ ಆಗಿ ಹೋಯಿತು.
ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗಿ ಅವರಿಗೂ ಮಕ್ಕಳಾಗಿ, ಒಂದು ನೆಲೆ ಕಂಡುಕೊಂಡಿದ್ದಾರೆ. ಆದರೆ ನಿನ್ನೆ ಇದ್ದಕ್ಕಿಂತೆಯೇ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದುಬಿಟ್ಟಿತು. ಅದೇನೆಂದರೆ, 45 ವರ್ಷಗಳ ಹಿಂದೆ ಹೋಗಿದ್ದ ಸೂರತ್ ವಾಪಸ್ ಮನೆಗೆ ಬಂದುಬಿಟ್ಟಿದ್ದ!
ಮಕ್ಕಳಿಗಂತೂ ಅಪ್ಪನನ್ನು ಗುರುತುಹಿಡಿಯಲು ಸಾಧ್ಯವೇ ಇರಲಿಲ್ಲ. ಆದರೆ ಪತ್ನಿಯಾದವಳಿಗೆ ಗಂಡನ ಗುರುತು ಸಿಗದೇ ಹೋದೀತೆ? ಸತ್ತೇ ಹೋಗಿದ್ದಾನೆ ಎಂದುಕೊಂಡ ಗಂಡ ಈ ರೀತಿ ಒಮ್ಮೆಲೇ ಪ್ರತ್ಯಕ್ಷನಾಗಿದ್ದನ್ನು ಕಂಡು, ಆಕೆಗೆ ತಲೆ ತಿರುಗಿದಂತಾಯಿತು. ಸೂರತ್ ಆಕೆಯ ಬಳಿ ಹೋಗಿ ಕ್ಷಮಿಸುವಂತೆ ಪರಿಪರಿಯಾಗಿ ಬೇಡಿಕೊಂಡ. ಮಕ್ಕಳು, ಮೊಮ್ಮಕ್ಕಳನ್ನು ನೋಡಿ ಖುಷಿಯಿಂದ ತನ್ನೆಲ್ಲಾ ಕಥೆ ಕೇಳಿ ಈಗ ತಾನು ನಿರ್ಗತಿಕನಾಗಿದ್ದು, ಮನೆಗೆ ವಾಪಸ್ ಬಂದಿದ್ದೇನೆ. ದಯವಿಟ್ಟು ಕ್ಷಮಿಸಿ ಎಂದು ಕೋರಿಕೊಂಡ.
ಅರೆಕ್ಷಣ ಹೆಣ್ಣಿನ ಮನಸ್ಸು ಕರಗಿತು. ಆದರೆ ಮಕ್ಕಳು ಮಾತ್ರ ಈ ಅಪ್ಪನನ್ನು ಸುತರಾಂ ಒಪ್ಪಲಿಲ್ಲ. ಅಮ್ಮ ಹಾಗೂ ತಮ್ಮನ್ನು ತಬ್ಬಲಿಯಾಗಿ ಮಾಡಿ, ಅಮ್ಮ ಪಡಬಾರದ ಕಷ್ಟಪಡುವಂತೆ ಮಾಡಿ ನಿನ್ನನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎಂದು ದಿಢೀರ್ ಬಾಗಿಲು ಹಾಕಿಬಿಟ್ಟರು. ಹೆಂಡತಿಯ ಮನಸ್ಸು ಅರೆ ಕ್ಷಣ ವಿಚಲಿತವಾದರೂ, ಗಂಡ ತನಗೆ ಹಾಗೂ ಪುಟ್ಟಪುಟ್ಟ ಕಂದಮ್ಮಗಳಿಗೆ ಮಾಡಿದ ದ್ರೋಹ ಕಣ್ಣಮುಂದೆ ಬಂದು ಹೃದಯವನ್ನು ಕಲ್ಲಾಗಿಸಿಕೊಂಡಳು. ಯಾವುದೇ ಕಾರಣಕ್ಕೂ ಮನೆಯೊಳಕ್ಕೆ ಸೇರಿಸುವುದಿಲ್ಲ ಎಂದು ಭಾರವಾದ ಮನಸ್ಸಿನಲ್ಲಿಯೇ ಹೇಳಿದಳು.
ಈ ವಿಷಯ ಊರಿನ ಮುಖ್ಯಸ್ಥರಿಗೆ ತಲುಪಿದೆ. ಇಷ್ಟು ವರ್ಷ ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ನನ್ನ ಕುಟುಂಬಕ್ಕೆ ಸ್ವಲ್ಪವೂ ಹಣ ಕಳುಹಿಸಲಿಲ್ಲ. ಇದು ನಾನು ಮಾಡಿರುವ ಅನ್ಯಾಯ. ಇದರ ಅರಿವು ನನಗಾಗಿದೆ. ಆದರೆ ಈಗ ನಾನು ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೇ ನಿರ್ಗತಿಕನಾಗಿದ್ದೇನೆ. ವಲಸೆ ಕಾರ್ಮಿಕರನ್ನು ಸಾಗಿಸಲು ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಹೆಸರು ನೋಂದಾಯಿಸಿಕೊಂಡು ನಾನೂ ಬಂದಿದ್ದೇನೆ. ದಯವಿಟ್ಟು ಹೆಂಡತಿ, ಮಕ್ಕಳಿಗೆ ನನ್ನನ್ನು ಮನೆಗೆ ಸೇರಿಸಿಕೊಳ್ಳಲು ತಿಳಿಸಿ ಎಂದು ಈತ ಮುಖ್ಯಸ್ಥರನ್ನು ಕೋರಿಕೊಂಡಿದ್ದಾರೆ.
ದೂರದ ಊರಿನಿಂದ ಬಂದಿರುವ ಹಿನ್ನೆಲೆಯಲ್ಲಿ ಸದ್ಯ ಈತನನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಹೆಂಡತಿ-ಮಕ್ಕಳ ಬಗ್ಗೆ ನಾಲ್ಕೂವರೆ ದಶಕ ಕಿಂಚಿತ್ತೂ ಯೋಚನೆ ಮಾಡದೇ ಇದೀಗ ಎಲ್ಲವೂ ಕಳೆದುಕೊಂಡ ಮೇಲೆ ಮನೆಗೆ ವಾಪಸಾಗಿದ್ದರಿಂದ ಗ್ರಾಮಸ್ಥರಿಗೂ ಈತನ ಮೇಲೆ ಕೋಪ ಬಂದಿದೆ. ಇದು ಸಂಪೂರ್ಣ ಕೌಟುಂಬಿಕ ವಿಷಯ. ನಾವು ಮಧ್ಯೆ ಪ್ರವೇಶ ಮಾಡುವುದಿಲ್ಲ. ಅಷ್ಟಕ್ಕೂ ಈತ ಮಾಡಿರುವುದು ಸ್ವಲ್ಪವೂ ಸರಿಯಿಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.
ಮಕ್ಕಳಂತೂ ತಾವಂತೂ ಅಪ್ಪನನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಅಮ್ಮ ಬೇಕಿದ್ದರೆ ಕ್ಷಮಿಸಿಕೊಳ್ಳಲಿ, ನಮ್ಮದೇನೂ ತಕರಾರು ಇಲ್ಲ ಎಂದುಬಿಟ್ಟಿದ್ದಾರೆ! (ಏಜೆನ್ಸೀಸ್)