ಗೋಮಾಂಸ ಶೇಖರಣೆ ಮಾಹಿತಿ ಮೇರೆಗೆ ಪೊಲೀಸರ ದಾಳಿ; ಪ್ಯಾನಿಕ್​ ಅಟ್ಯಾಕ್​ನಿಂದ ಮಹಿಳೆ ಸಾವು.. ಮುಂದೇನಾಯ್ತು

Untitled-design-2024-08-27T150555.292
Published on

ಲಖನೌ: ಮನೆಯಲ್ಲಿ ಗೋಮಾಂಸ ಶೇಖರಿಸಿಟ್ಟಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರು ಪ್ಯಾನಿಕ್​ ಅಟ್ಯಾಕ್​ನಿಂದ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಬಿಜ್ನೋರ್‌ನ ಖತಾಯಿ ಗ್ರಾಮದ ನಿವಾಸಿ ರಜಿಯಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಪೊಲೀಸರಿಗೆ ಅನಾಮಧೇಯ ವ್ಯಕ್ತಿಯೊಬ್ಬರ ಅವರ ಮನೆಯಲ್ಲಿ ಗೋಮಾಂಸ(ಹಸುವಿನ ಮಾಂಸ) ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದ್ದಾರೆ. ಆ ಮಾಹಿತಿ ಮೇರೆಗೆ ಉತ್ತರಪ್ರದೇಶ ಗೋಹತ್ಯೆ ತಡೆ ಕಾಯಿದೆ, 1955ರ ಶಂಕಿತ ಉಲ್ಲಂಘನೆಯ ಅಡಿಯಲ್ಲಿ ಅವರ ಮನೆ ಮೇಲೆ ರೇಡ್​ ಮಾಡಲಾಗಿದೆ. ಈ ಕಾಯಿದೆಯು ಗೋಹತ್ಯೆ ಮತ್ತು ಗೋಮಾಂಸ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುತ್ತದೆ.

ಗೋಮಾಂಸ ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ವಸ್ತುಗಳನ್ನು ಸ್ಥಳಾಂತರಿಸಿದ್ದಾರೆ. ನಾಲ್ವರು ಕಾನ್‌ಸ್ಟೆಬಲ್‌ಗಳು ತಮ್ಮ ಮನೆಗೆ ನುಗ್ಗಿ ತನ್ನ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ರಜಿಯಾ ಅವರ ಪುತ್ರ ನಾಸಿಮ್ ಆರೋಪಿಸಿದ್ದಾರೆ. ಅಲ್ಲದೆ ಸರ್ಕಾರದಿಂದ ನಿಷೇಧಿಸಲ್ಪಟ್ಟ ಯಾವುದೇ ವಸ್ತುಗಳನ್ನು ಅಕ್ರಮವಾಗಿ ನಮ್ಮ ಮನೆಯಲ್ಲಿ ಸಂಗ್ರಹಿಸಿಲ್ಲ. ಯಾವುದೇ ಗೋಮಾಂಸವನ್ನು ನಮ್ಮ ಮನೆಯಲ್ಲಿ ಇಟ್ಟಿರಲಿಲ್ಲ. ದಾಳಿಯ ಸಮಯದಲ್ಲಿ ಪೊಲೀಸರ ಕಠಿಣ ನಡವಳಿಕೆಯು ನನ್ನ ತಾಯಿಗೆ ಪ್ಯಾನಿಕ್​ ಅಟ್ಯಾಕ್​ ಆಗುವಂತೆ ಮಾಡಿದೆ ಎಂದು ಹೇಳಿದ್ದಾರೆ.

ರಜಿಯಾ ಅವರಿಗೆ ಪ್ಯಾನಿಕ್​ ಅಟ್ಯಾಕ್​ ಆದ ತಕ್ಷಣವೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ನಗೀನಾ ಶಾಸಕ ಮಂಜೋಜ್ ಕುಮಾರ್ ಪರಸ್ ಅವರು ರಜಿಯಾ ಅವರ ಮನೆ ಮೇಲೆ ದಾಳಿ ಮಾಡಿದ ಪೊಲೀಸರ ವಿರುದ್ಧ ಶಿಕ್ಷಾರ್ಹ ಕ್ರಮಕ್ಕೆ ಒತ್ತಾಯಿಸಿದರು.

ಬಿಜ್ನೋರ್ ಪೊಲೀಸ್ ಅಧೀಕ್ಷಕ ಅಭಿಷೇಕ್ ಝಾ ಅವರು ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ರಜಿಯಾ ಅವರ ಮನೆ ಮೇಲೆ ದಾಳಿ ಮಾಡಲು ಕಳುಹಿಸಿದ್ದರು.ಆದರೆ ಶೋಧನೆ ವೇಳೆ ಅವರ ಮನೆಯಲ್ಲಿ ಗೋಮಾಂಸ ಅಥವಾ ಇತರ ಯಾವುದೇ ಆಕ್ಷೇಪಾರ್ಹ ವಸ್ತು ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ. ರಜಿಯಾ ಅವರ ಮನೆಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿರುವ ಬಗ್ಗೆ ಸುಳಿವು ನೀಡಿದ ಆಪಾದಿತ ಮಾಹಿತಿದಾರನ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಸುಳ್ಳು ಮತ್ತು ಪೊಲೀಸರನ್ನು ದಾರಿ ತಪ್ಪಿಸುವ ಮಾಹಿತಿ ಎಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಪೊಲೀಸರ ಈ ವರ್ತನೆ ವಿರೋಧಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಜೀಬಾಬಾದ್ ಸಿಒ ದೇಶ್ ದೀಪಕ್ ಮತ್ತು ಪೊಲೀಸ್ ಠಾಣೆ ಪ್ರಭಾರಿ ಜೈ ಭಗವಾನ್ ಸಿಂಗ್ ಆಸ್ಪತ್ರೆಗೆ ಆಗಮಿಸಿ ಕುಟುಂಬ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net