

ಲಖನೌ: ದೇಶಾದ್ಯಂತ ಕರೊನಾ ಎರಡನೇ ಅಲೆ ದಿನೇದಿನೆ ಹೆಚ್ಚಾಗುತ್ತಿದೆ. ಕೋವಿಡ್-19ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಸಿಕೆ ಪಡೆಯುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲ ಡೋಸ್ ಲಸಿಕೆ ಪಡೆಯುವ ಮೂಲಕ ಜನರನ್ನು ಹುರಿದುಂಬಿಸಿದ್ದಾರೆ.
ಇಂದು (ಏಪ್ರಿಲ್ 05) ಬೆಳಗ್ಗೆ ರಾಜಧಾನಿ ಲಖನೌದ ಸಿವಿಲ್ ಆಸ್ಪತ್ರೆಯಲ್ಲಿ ಸಿಎಂ ಯೋಗಿ ಲಸಿಕೆಯನ್ನು ಪಡೆದುಕೊಂಡರು. ಬಳಿಕ ಮಾತನಾಡಿ ಅವರು ಲಸಿಕೆ ಪಡೆದುಕೊಂಡು ಬಳಿಕವು ಜನರು ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ವಹಿಸಿ ಎಂದು ಮನವಿ ಮಾಡಿದರು.
ಲಸಿಕೆಯನ್ನು ಉಚಿತವಾಗಿ ನೀಡಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಿಎಂ ಯೋಗಿ ಇದೇ ವೇಳೆ ಧನ್ಯವಾದ ತಿಳಿಸಿದರು. ಅಲ್ಲದೆ, ದೇಶದ ವಿಜ್ಞಾನಿಗಳಿಗೂ ಧನ್ಯವಾದ ಅರ್ಪಿಸಿದರು.
ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ನಮ್ಮ ಆಯ್ಕೆ ಬಂದಾಗ ನಾವೆಲ್ಲ ಖಂಡಿತವಾಗಿ ಲಸಿಕೆ ತೆಗೆದುಕೊಳ್ಳೋಣ ಎಂದು ಜನರನ್ನು ಯೋಗಿ ಹುರಿದುಂಬಿಸಿದರು. (ಏಜೆನ್ಸೀಸ್)