

ಲಖನೌ: ಸಂಜೆ ಹೊತ್ತು ಬಿಸಿ ಬಿಸಿ ಚಾಟ್ ತಿನ್ನಲೆಂದು ಚಾಟ್ ಸ್ಟ್ರೀಟ್ಗಿಳಿಯುವ ಗ್ರಾಹಕರ ಸಂಬಂಧವೇ ಎರಡು ಅಂಗಡಿಗಳು ಕಿತ್ತಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ. ಅಂಗಡಿ ಕಾರ್ಮಿಕರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಬಾಗ್ಪತ್ ಜಿಲ್ಲೆಯ ಬರಾತ್ ಪಟ್ಟಣದ ಅತಿಥಿ ಭವನ ಮಾರುಕಟ್ಟೆಯಲ್ಲಿ ಕಿತ್ತಾಟ ನಡೆದಿದೆ. ಒಂದು ಅಂಗಡಿಗೆ ಹೋಗಬೇಕಿದ್ದ ಗ್ರಾಹಕರನ್ನು ಇನ್ನೊಂದು ಅಂಗಡಿಯವರು ಸೆಳೆದರು ಎನ್ನುವ ಕಾರಣಕ್ಕೆ ಕಿತ್ತಾಟ ಆಗಿರುವುದಾಗಿ ಹೇಳಲಾಗಿದೆ. ಸುಮಾರು 20 ನಿಮಿಷಗಳ ಕಾಲ ಎರಡೂ ಅಂಗಡಿಯ ಕಾರ್ಮಿಕರು ಕೋಲಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ಸ್ಥಳೀಯರೊಬ್ಬರು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಬಿಟ್ಟಿದ್ದಾರೆ.
ಈ ಕಿತ್ತಾಟದಲ್ಲಿ 12 ಮಂದಿಗೆ ಗಾಯವಾಗಿದೆ. ಯಾರಿಗೂ ಗಂಭೀರ ಗಾಯವೇನು ಆಗಿಲ್ಲ. ಪ್ರಕರಣದ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಪತ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)