ಉತ್ತರ ಪ್ರದೇಶ: ಕರ್ಹಾಲ್ ಶಾಸಕ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ!

a
Published on

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕನೌಜ್ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಕರ್ಹಾಲ್ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯೊಂದಿಗೆ ಅಖಿಲೇಶ್ ಯಾದವ್ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನೂ ತ್ಯಜಿಸಲಿದ್ದಾರೆ.

ಉತ್ತರ ಪ್ರದೇಶ ರಾಜ್ಯ ವಿಧಾನಸಭೆಯಲ್ಲಿ ಅಖಿಲೇಶ್ ಯಾದವ್ ಅವರ ಬದಲಾಗಿ ವಿರೋಧ ಪಕ್ಷದ ನಾಯಕ ಯಾರಾಗಲಿದ್ದಾರೆ ಮತ್ತು ಅವರ ಬದಲಾಗಿ ವಿಧಾನಸಭಾ ಚುನಾವಣೆಗೆ ಆ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಪಕ್ಷ ನಿರ್ಧಾರ ತೆಗೆದುಕೊಂಡಿಲ್ಲ.

ಈ ಹಿಂದೆಯೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕನೌಜ್​ ಲೋಕಸಭೆ ಸ್ಥಾನವನ್ನು ಉಳಿಸಿಕೊಳ್ಳುವ ಸುಳಿವು ನೀಡಿದ್ದರು. ಎರಡು ಕ್ಷೇತ್ರಗಳ ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಎಸ್​ಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಅಖಿಲೇಶ್ ಯಾದವ್ ಅವರು ವಿಧಾನಸಭೆಗೆ ರಾಜೀನಾಮೆ ನೀಡುವ ಮೂಲಕ ತಮ್ಮ ಸಂಸದ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ಹಾಲ್ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ನೀಡಿದ ನಂತರ, ಈ ಸ್ಥಾನದಿಂದ ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದರ ಕುರಿತು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮೈನ್‌ಪುರಿ ಮಾಜಿ ಸಂಸದ ತೇಜ್ ಪ್ರತಾಪ್ ಯಾದವ್ ಅವರನ್ನು ಕರ್ಹಾಲ್ ವಿಧಾನಸಭೆಯಿಂದ ಕಣಕ್ಕಿಳಿಸಬಹುದು ಎಂಬ ಚರ್ಚೆ ಕೂಡ ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗಳಿಸುವ ಮೂಲಕ ದೇಶದ 3ನೇ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ರಾಜಕೀಯ ಪಕ್ಷವಾಗಿ ಸಮಾಜವಾದಿ ಪಾರ್ಟಿ ಗುರುತಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net