Bomb Threats: ವಿಮಾನಗಳಾಯ್ತು, ಈಗ 10ಸ್ಟಾರ್​ ಹೋಟೆಲ್​ಗೆ ಬಾಂಬ್​ ಬೆದರಿಕೆ..ಹಣಕೊಡದಿದ್ದರೆ ಸ್ಫೋಟಿಸುವ ಎಚ್ಚರಿಕೆ

Bombthreat mp
Published on

ಲಖನೌ: ಉತ್ತರ ಪ್ರದೇಶದ ಲಖನೌನ 10 ಐಷಾರಾಮಿ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ(Bomb Threats) ಬಂದಿದೆ. ಇ-ಮೇಲ್ ಮೂಲಕ ಸಂದೇಶ ಕಳೂಹಿಸಿರುವವರು 55ಸಾವಿರ ಅಮೆರಿಕನ್​ ಡಾಲರ್​ಗೆ ಬೇಡಿಕೆಯಿಟ್ಟಿದ್ದಾರೆ.

ಇಮೇಲ್‌ ಸ್ವೀಕರಿಸಿದ ತಕ್ಷಣ ಹೋಟೆಲ್ ಗಳವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

ನಮ್ಮ ಬೇಡಿಕೆಯನ್ನು ಪೂರೈಸದಿದ್ದರೆ ಬಾಂಬ್‌ಗಳನ್ನು ಹಾಕಿ ಹೋಟೆಲ್​ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ವರದಿಗಳ ಪ್ರಕಾರ, ಹೋಟೆಲ್‌ಗಳಿಗೆ ಕಳುಹಿಸಲಾದ ಇಮೇಲ್‌ಗಳಲ್ಲಿ "ಹೋಟೆಲ್ ಮೈದಾನದಲ್ಲಿ ಬಾಂಬ್‌ಗಳನ್ನು ಕಪ್ಪು ಚೀಲಗಳಲ್ಲಿ ಹಾಕಿ ಮರೆಯಲ್ಲಿ ಇಡಲಾಗಿದೆ" ಎಂದು ಉಲ್ಲೇಖಿಸಲಾಗಿದೆ.

ಈ ಮೇಲ್​ ಮಾಡಿರುವವನು "ನನಗೆ $55,000 ಬೇಕು, ಕೊಡದಿದ್ದರೆ ನಾನು ಸ್ಫೋಟಕಗಳನ್ನು ಸ್ಫೋಟಿಸುತ್ತೇನೆ. ಆಗ ರಕ್ತವು ಎಲ್ಲೆಡೆ ಹರಡುತ್ತದೆ. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಯಾವುದೇ ಪ್ರಯತ್ನ ಫಲಿಸುವುದಿಲ್ಲ. ಅವುಗಳನ್ನು ಮುಟ್ಟಿದರೆ ಸ್ಫೋಟಿಸುತ್ತವೆ" ಎಂದು ಎಚ್ಚರಿಕೆ ನೀಡಿದ್ದಾನೆ.

ಲಖನೌನ ಹೋಟೆಲ್‌ಗಳಾದ ಮ್ಯಾರಿಯೊಟ್, ಸರಕಾ, ಪಿಕಾಡಿಲಿ, ಕಂಫರ್ಟ್ ವಿಸ್ಟಾ, ಫಾರ್ಚೂನ್, ಲೆಮನ್ ಟ್ರೀ, ಕ್ಲಾರ್ಕ್ ಅವಧ್, ಕಾಸಾ, ದಯಾಲ್ ಗೇಟ್‌ವೇ ಮತ್ತು ಸಿಲ್ವೆಟ್ ಹೋಟೆಲ್​ಗಳಿಗೆ ಬೆದರಿಕೆ ಮೇಲ್​ ಬಂದಿದೆ.

ಇತ್ತೀಚೆಗೆ ಭಾರತದ ವಿವಿಧ ಏರ್‌ಲೈನ್ಸ್‌ನ 70 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net