

ಹೂವಿನಹಡಗಲಿ : ತಾಲೂಕಿನ ಉತ್ತಂಗಿ ಗ್ರಾಮದ ಶಂಕರ ಸ್ವಾಮಿ ಮಠದ ಪೀಠಾಧಿಪತಿ ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನದ ಕ್ರಿಯಾಮೂರ್ತಿಗಳಾಗಿದ್ದ ಶಂಕರ ಸ್ವಾಮೀಜಿ (98) ಅನಾರೋಗ್ಯದಿಂದ ಶನಿವಾರ ಮಧ್ಯರಾತ್ರಿ ಲಿಂಗೈಕ್ಯರಾದರು.
ಉತ್ತಂಗಿ ಗ್ರಾಮದ ಮಠದಲ್ಲಿ ನಿಧನರಾಗಿದ್ದಾರೆ. ಶಂಕರಸ್ವಾಮಿ ಸಂಸ್ಥಾನ ಮಠ ಸೇರಿದಂತೆ ರಾಜ್ಯದ ಕೊಟ್ಟೂರು, ಉತ್ತಂಗಿ, ಹೊಳಗುಂದಿ, ಇಟ್ಟಿಗಿ, ಹಿರೇಕೆರೂರು ತಾಲ್ಲೂಕು ಒಡೆಯಂಪುರ, ಕೂಡ್ಲಿಗಿ ತಾಲ್ಲೂಕು ಎಂ.ಬಿ.ಅಯ್ಯನಹಳ್ಳಿ, ಶಿಕಾರಿಪುರ ತಾಲೂಕಿನ ನಿಡಗೊಂದಿಗಳಲ್ಲಿ ಸುಮಾರು 1960 ರಿಂದಲೂ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತಂಗಿಯ ಮಠದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಉತ್ತಂಗಿ ಮಠದಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಮಠದ ಮೂಲಕಗಳು ತಿಳಿಸಿವೆ.