ಯುಟಿಪಿ ಭೂ ಸ್ವಾಧೀನಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

18 smg 6a
Published on

ಶಿವಮೊಗ್ಗ: ಐದೂವರೆ ಎಕರೆ ಜಮೀನು ಕೊಟ್ಟ ರೈತನಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ಯುಟಿಪಿ(ತುಂಗಾ ಮೇಲ್ದಂಡೆ ಯೋಜನೆ)ಯ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.

ಗಾಡಿಕೊಪ್ಪದ ವೆಂಕಟೇಶ್ ಅವರು 1997ರಲ್ಲಿ ಅನುಪಿನಕಟ್ಟೆ-ಗಾಡಿಕೊಪ್ಪ ನಡುವೆ ಸರ್ವೆ ನಂ.75ರಲ್ಲಿ ಐದೂವರೆ ಎಕರೆ ಜಾಗವನ್ನು ಯುಟಿಪಿಗೆ ಬಿಟ್ಟು ಕೊಟ್ಟಿದ್ದರು. ಆಗ ವೆಂಕಟೇಶ್ ಅವರಿಗೆ ಎಕರೆಗೆ ತಲಾ 3 ಲಕ್ಷ ರೂ.ನಂತೆ ಪರಿಹಾರ ವಿತರಿಸಲಾಗಿತ್ತು. ಆದರೆ ವೆಂಕಟೇಶ್ ಅವರು 2.40 ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಹೆಚ್ಚಿನ ಪರಿಹಾರ ವಿತರಣೆಗೆ ಆದೇಶಿಸಿತ್ತು. ನ್ಯಾಯಾಲಯದ ಸೂಚನೆ ಇದ್ದರೂ ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸಿದ ಕಾರಣಕ್ಕೆ ಬುಧವಾರ ಯುಟಿಪಿಯ ಭೂಸ್ವಾಧೀನಾಧಿಕಾರಿಗಳ ಕಚೇರಿ ಪೀಠೋಪಕರಣ ಜಪ್ತಿ ಮಾಡುವಂತೆ ಆದೇಶಿಸಿ ವಾರೆಂಟ್ ಕೂಡ ನೀಡಿತ್ತು. ಹಾಗಾಗಿ ನಾಲ್ವರು ಅಮೀಂದಾರರು ತಹಸೀಲ್ದಾರ್ ಕಚೇರಿ ಪಕ್ಕದಲ್ಲಿದ್ದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ತೆರಳಿ ಐದು ಕಂಪ್ಯೂಟರ್, ಐದು ಕುರ್ಚಿಗಳು ಮತ್ತು ಎರಡು ಟೇಬಲ್‌ಗಳನ್ನು ಹೊತ್ತೊಯ್ದರು.

ವಿಶೇಷವೆಂದರೆ ಭೂ ಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿನ ಪೀಠೋಪರಣಗಳನ್ನು ಜಪ್ತಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಕಾರ್ಯಾಲಯದಲ್ಲಿದ್ದ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿತ್ತು. ಈಗ ಮತ್ತೆ ಪರಿಹಾರ ವಿತರಣೆ ವಿಳಂಬದಲ್ಲಿ ನ್ಯಾಯಾಲಯ ಪೀಠೋಪಕರಣ ಜಪ್ತಿಗೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net