ನನಗಾಗಿ ವೆಜೆಟೇರಿಯನ್ ಆದ್ರು ಭಾರತೀಯ ಅಡುಗೆ ಕಲಿತ್ರು! US ಉಪಾಧ್ಯಕ್ಷ ಅಭ್ಯರ್ಥಿ ಬಗ್ಗೆ ಪತ್ನಿ ಉಷಾ ಮಾತು

Usha Vance
Published on

ವಾಷಿಂಗ್ಟನ್​: ಅಮೆರಿಕದಲ್ಲಿ ಚುನಾವಣಾ ಕಣ ರಂಗೇರಿದೆ. ಹಾಲಿ ಅಧ್ಯಕ್ಷ ಹಾಗೂ ಡೆಮೊಕ್ರೆಟಿಕ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್​ ಮತ್ತು ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಓಹಿಯೋ ಸೆನೆಟರ್ ಜೆಡಿ ವ್ಯಾನ್ಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಟ್ರಂಪ್​ ಆಯ್ಕೆ ಮಾಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಜೆಡಿ ವ್ಯಾನ್ಸ್​ ಮತ್ತು ಭಾರತಕ್ಕೂ ನಂಟಿದೆ. ಅದೇನೆಂದರೆ, ವ್ಯಾನ್ಸ್​ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್​ ಭಾರತೀಯ ಮೂಲದವರು. ಹೀಗಾಗಿ ಜೆಡಿ ವ್ಯಾನ್ಸ್​ ಭಾರತದ ಅಳಿಯ.

ಉಷಾ ಚಿಲುಕುರಿ ಅವರು ಭಾರತೀಯ ಮೂಲದ ವಕೀಲೆ. ತಮ್ಮ ಪತಿ ಜೆಡಿ ವ್ಯಾನ್ಸ್​, ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್​ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಉಷಾ, ತಮ್ಮ ವೈಯಕ್ತಿಕ ಜೀವನದ ಕತೆ ಮತ್ತು ಅಮೆರಿಕದ ಮೇಲಿನ ತಮ್ಮ ವಿಷನ್​ ಏನು ಎಂಬುದನ್ನು ಬಿಚ್ಚಿಟ್ಟರು.

ಜೆಡಿ ವ್ಯಾನ್ಸ್​ ಆಗಲಿ ಅಥವಾ ನಾನಾಗಲಿ ಇಂಥದ್ದೊಂದು ಸ್ಥಾನ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಅಮೆರಿಕ ಕನಸಿನ ಕುರಿತು ಹೆಚ್ಚು ಗಟ್ಟಿಯಾದ ಉದಾಹರಣೆಯನ್ನು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ. ಓಹಿಯೋದ ಮಿಡಲ್​ಟೌನ್​ನಲ್ಲಿ ಕಠಿಣ ಸಮಯದಲ್ಲಿ ತನ್ನ ಅಜ್ಜಿಯ ಆಶ್ರಯದಲ್ಲಿ ಬೆಳೆದ ಓರ್ವ ಹುಡುಗ, ಇಂದು ದೊಡ್ಡ ಸವಾಲುಗಳ ನಡುವೆಯೂ ದೇಶವನ್ನು ಮುನ್ನಡೆಸಲು ಆಯ್ಕೆಮಾಡಲಾಗಿದೆ ಎಂದು ಉಷಾ ಹೇಳಿದರು.

ಇದೇ ಸಂದರ್ಭದಲ್ಲಿ ತಮ್ಮ ಮೊದಲ ಭೇಟಿಯ ಬಗ್ಗೆ ಉಷಾ ಮಾತನಾಡಿ, ವ್ಯಾನ್ಸ್​ಗೆ ನನ್ನ ಬಗ್ಗೆ ಎಲ್ಲವನ್ನು ತಿಳಿದುಕೊಳ್ಳಲು ಬಯಸಿದ್ದರು. ನಾನು ಎಲ್ಲಿಂದ ಬಂದೆ ಮತ್ತು ನನ್ನ ಜೀವನ ಹೇಗಿದೆ ಎಂಬುದನ್ನು ತಿಳಿಯಲು ಬಯಸಿದ್ದರು. ನನ್ನ ಹಿನ್ನೆಲೆ ಮತ್ತು ನಮ್ಮ ಆಚಾರ-ವಿಚಾರಗಳನ್ನು ಒಪ್ಪಿಕೊಂಡರು. ವ್ಯಾನ್ಸ್​ ಓರ್ವ ಆಡಂಬರವಿಲ್ಲದ, ತುಂಬಾ ಸರಳತೆಯನ್ನು ಹೊಂದಿರುವ ವ್ಯಕ್ತಿ. ಮಾಂಸಾಹಾರಕ್ಕೆ ಆದ್ಯತೆ ನೀಡುವ ವ್ಯಾನ್ಸ್​, ನನಗೋಸ್ಕರ ಸಸ್ಯಾಹಾರವನ್ನು ಅಳವಡಿಸಿಕೊಂಡರು ಮತ್ತು ನನ್ನ ತಾಯಿಗಾಗಿ ಭಾರತೀಯ ಅಡುಗೆ ತಯಾರಿಸುವುದನ್ನು ಕಲಿತರು ಎಂದು ಹಳೆಯ ದಿನಗಳನ್ನು ಉಷಾ ಮೆಲಕು ಹಾಕಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿ ವ್ಯಾನ್ಸ್​, ತಮ್ಮ ಪತ್ನಿಯನ್ನು ಕೊಂಡಾಡಿದರು. ನನ್ನ ಸುಂದರ ಪತ್ನಿ ಎಂದು ಕರೆದರು. ಉಷಾ ಓರ್ವ ವಿಶ್ವಾಸನೀಯ ವಕೀಲೆ ಮತ್ತು ಉತ್ತಮ ತಾಯಿ ಎಂದು ಗುಣಗಾನ ಮಾಡಿದರು. ದಕ್ಷಿಣ ಏಷ್ಯಾದ ವಲಸಿಗ ಸಮುದಾಯದ ಬಗ್ಗೆ ಮಾತನಾಡುತ್ತಾ, ಅವರೆಲ್ಲ ವಿಶ್ವಾಸನೀಯ ಜನರು. ಈ ದೇಶವನ್ನು ಹಲವು ವಿಧಗಳಲ್ಲಿ ಪ್ರಾಮಾಣಿಕವಾಗಿ ಶ್ರೀಮಂತಗೊಳಿಸಿದ ಜನರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ 39 ವರ್ಷದ ಜೆಡಿ ವ್ಯಾನ್ಸ್‌, 1984 ಆಗಸ್ಟ್ 2ರಂದು ಓಹಿಯೋದ ಮಿಡಲ್‌ಟೌನ್‌ನಲ್ಲಿ ಜನಿಸಿದರು. ವ್ಯಾನ್ಸ್ ಬಾಲ್ಯ ಜೀವನ ತುಂಬಾ ಕಷ್ಟದಿಂದ ಕೂಡಿತ್ತು. ತಾಯಿ ಮಾದಕ ವ್ಯಸನಿ ಆಗಿದ್ದರಿಂದ ತಂದೆಯ ಆಶ್ರಯದಲ್ಲಿ ಬೆಳೆದರು. ಆದರೆ, ವ್ಯಾನ್ಸ್​ ಅವರನ್ನು ಹೆಚ್ಚಾಗಿ ನೋಡಿಕೊಂಡಿದ್ದು, ಅವರ ಅಜ್ಜಿ. ಒಂದೆಡೆ ಆರ್ಥಿಕ ಸಮಸ್ಯೆಗಳು ಕೂಡ ಕುಟುಂಬವನ್ನು ಬಾಧಿಸುತ್ತಿತ್ತು. ಇದೆಲ್ಲವನ್ನು ಹಿಮ್ಮೆಟ್ಟಿಸಿ ವ್ಯಾನ್ಸ್​ ಬೆಳೆದು ನಿಂತರು. ವ್ಯಾನ್ಸ್​ ಅವರು ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ಯೇಲ್ ಲಾ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. ಬಳಿಕ ವ್ಯಾನ್ಸ್ ಸಿಲಿಕಾನ್ ವ್ಯಾಲಿಯಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ ಆಗಿ ಕೆಲಸ ಮಾಡುವ ಮೂಲಕ ವ್ಯಾಪಾರ ಜಗತ್ತಿಗೆ ಕಾಲಿಟ್ಟರು. ಯೇಲ್‌ ಲಾ ಸ್ಕೂಲ್‌ನಲ್ಲಿ ಉಷಾ ಅವರು ವ್ಯಾನ್ಸ್​ಗೆ ಸಹಪಾಠಿಯಾಗಿದ್ದರು. ಈ ವೇಳೆ ವ್ಯಾನ್ಸ್​ಗೆ ಉಷಾ ಸಾಕಷ್ಟು ಸಹಾಯಗಳನ್ನು ಮಾಡಿದ್ದರು. ಈ ವೇಳೆ ಇಬ್ಬರು ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದರಿಂದ, ಇಬ್ಬರ ನಡುವೆ ಸ್ನೇಹ ಉಂಟಾಗಿ, ಆ ಸ್ನೇಹ ಪ್ರೀತಿಗೆ ತಿರುಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2014ರಲ್ಲಿ ಇಬ್ಬರು ಮದುವೆಯಾದರು. ದಂಪತಿಗೆ ಐವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net