

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿರಿಸಿದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆ ಅನುದಾನವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ವತಿಯಿಂದ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ 2013-14ರಲ್ಲಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾಯ್ದೆ ಜಾರಿಗೆ ತಂದು, ಇದರ ಅಡಿಯಲ್ಲಿ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಮೀಸಲಿಡಲು ತೀರ್ಮಾನಿಸಲಾಯಿತು. ಈ ಯೋಜನೆಯು ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳ ಆಶಾಕಿರಣವಾಗಿತ್ತು. ಆದರೆ, ಈ ಯೋಜನೆಯ ಅನುದಾನವನ್ನು ಎಲ್ಲ ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳಲು ಪ್ರಾರಂಭಿಸಿರುವುದು ಖಂಡನೀಯ. ಯೋಜನೆ ಅನುದಾನವನ್ನು ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಬಿಎಸ್‌ಪಿ ಕಾರ್ಯಕರ್ತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಎಸ್‌ಪಿ ಮುಖಂಡರಾದ ಪಿ. ಚಂದ್ರಶೇಖರ್, ದಂಡಿಕೆರೆ ಬಸವಣ್ಣ, ಸಿ.ಶ್ರೀನಿವಾಸ ಪ್ರಸಾದ್, ಭರತ್ ಗೌಡ, ಸುನಿಲ್ ಕುಮಾರ್, ಬಿ. ಮಹದೇವಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.